ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್ ಸ್ಪಿನ್ನರ್. ಆಸ್ಟ್ರೇಲಿಯಾದಂತಹ ಫಾಸ್ಟ್ ಪಿಚ್ನಲ್ಲೇ ತನ್ನ ಸ್ಪಿನ್ ಮೂಲಕ ಜಾದೂ ಮಾಡಿದ ಬೌಲರ್. ಆದರೆ ಒಂದೇ ಒಂದು ವಿಕೆಟ್ಗಾಗಿ ನಾಥನ್ ಲಿಯೋನ್ 11 ತಿಂಗಳು ಕಾಯಬೇಕಾಯಿತು. 208 ಎಸೆತಗಳನ್ನು ಹಾಕಬೇಕಾಯಿತು. ಕೊನೆಗೂ ನಾಥನ್ ಲಿಯೋನ್ ಬಿಸಿಲು ಕುದುರೆಯನ್ನು ಹಿಡಿದು ಬಿಟ್ಟಿದ್ದಾರೆ. 400 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಭಾರತ ವಿರುದ್ಧದ ಸರಣಿಯಲ್ಲಿ ನಾಥನ್ ಲಿಯೋನ್ 399 ವಿಕೆಟ್ಗಳ ಗಡಿ ತಲುಪಿದ್ದರು. ಆದರೆ ಜನವರಿಯಲ್ಲಿ ನಡೆದ ಆ ಸರಣಿಯಲ್ಲಿ ಲಿಯೋನ್ಗೆ ವಿಕೆಟ್ ಬೀಳಲಿಲ್ಲ. ಅಲ್ಲಿಂದ ಮುಂದೆ ಕೋವಿಡ್ ಕಾರಣದಿಂದ ಆಸ್ಟ್ರೇಲಿಯಾದ ಟೆಸ್ಟ್ ಸರಣಿಗಳು ರದ್ದಾದವು. ಲಿಯೋನ್ ವಿಕೆಟ್ ಗಳಿಕೆ 399ರಲ್ಲೇ ಉಳಿದುಕೊಂಡಿತ್ತು. ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ಗಿಂತ ಮೊದಲೇ 390 ಟೆಸ್ಟ್ ವಿಕೆಟ್ ಗಡಿ ಮುಟ್ಟಿದ್ದ ಲಿಯೋನ್ 400 ವಿಕೆಟ್ ಗಡಿ ತಲುಪಲು 11 ತಿಂಗಳು ಕಾಯಬೇಕಾಯಿತು.
ಇಂಗ್ಲೆಂಡ್ ವಿರುದ್ದದ ನಡೆ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಡೇವಿಡ್ ಮಲಾನ್ ವಿಕೆಟ್ ಪಡೆಯುವ ಮೂಲಕ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ಗಳನ್ನು ಪೂರೈಸಿದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 17ನೇ ಬೌಲರ್ ಎನಿಸಿಕೊಂಡರು. ಈ ಮೂಲಕ ಶೇನ್ ವಾರ್ನ್ ಮತ್ತು ಗ್ಲೆನ್ ಮೆಕ್ ಗ್ರಾಥ್ ಬಳಿಕ 400 ಟೆಸ್ಟ್ ವಿಕೆಟ್ ಪಡೆದ ಆಸ್ಟ್ರೇಲಿಯಾದ 3ನೇ ಬೌಲರ್ ಅನ್ನುವ ಖ್ಯಾತಿಗೆ ಲಿಯೋನ್ ಭಾಜನರಾದರು. ಏಷ್ಯಾ ಹೊರತು ಪಡಿಸಿ 400 ಟೆಸ್ಟ್ ವಿಕೆಟ್ ಪಡೆದ ವಿಶ್ವದ 2ನೇ ಸ್ಪಿನ್ನರ್ ಅನ್ನುವ ಹೆಗ್ಗಳಿಕೆ ಕೂಡ ಲಿಯೋನ್ ಪಾಲಾಯಿತು. ಇದಕ್ಕೂ ಮೊದಲು ಶೇನ್ ವಾರ್ನ್ ಒಬ್ಬರೇ ಈ ಲಿಸ್ಟ್ ನಲ್ಲಿದ್ದರು.
101 ಟೆಸ್ಟ್ ಪಂದ್ಯಗಳನ್ನಾಡಿರುವ ನಾಥನ್ ಲಿಯಾನ್ ಒಟ್ಟು 403 ವಿಕೆಟ್ ಪಡೆದಿದ್ದಾರೆ. 18 ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. 3 ಬಾರಿ ಪಂದ್ಯದಲ್ಲಿ 10 ಕ್ಕೂ ಅಧಿಕ ವಿಕೆಟ್ ಉರುಳಿಸಿದ್ದಾರೆ.