ಮಹಿಳಾ ಕ್ರಿಕೆಟ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ತಮ್ಮ ಕ್ರಿಕೆಟ್ ಬದುಕಿನ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಟೀಂ ಇಂಡಿಯಾ ಮಹಿಳಾ ತಂಡದ ಹಿರಿಯ ಆಟಗಾರ್ತಿ ಎನಿಸಿರುವ ಮಿಥಾಲಿ ರಾಜ್, ಅತ್ಯಧಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಹಾಗೂ ಸಚಿನ್ ತೆಂಡುಲ್ಕರ್ ನಂತರ ಈ ಹೆಗ್ಗಳಿಕೆ ಪಡೆದ ಭಾರತದ ಎರಡನೇ ಪ್ಲೇಯರ್ ಎನಿಸಿದ್ದಾರೆ.
ಕಳೆದ ಎರಡು ದಶಕಗಳಿಂದಲೂ ಟೀಂ ಇಂಡಿಯಾದ ಮಹಿಳಾ ತಂಡದಲ್ಲಿ ಆಡುತ್ತಿರುವ ಮಿಥಾಲಿ ರಾಜ್, 2000ನೇ ಸಾಲಿನಲ್ಲಿ ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯಾವಳಿ ಆಡಿದ್ದರು. ಇದಾದ ನಂತರದಲ್ಲಿ 2005, 2009, 2013, 2017 ಹಾಗೂ ಪ್ರಸ್ತುತ ನ್ಯೂಜಿ಼ಲೆಂಡ್ನಲ್ಲಿ ನಡೆಯುತ್ತಿರುವ 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ಈ ಹಿರಿಮೆಗೆ ಭಾಜನರಾಗಿದ್ದಾರೆ. ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಆಡುವ ಮೂಲಕ ಮಿಥಾಲಿ ರಾಜ್, “ಕ್ವೀನ್ ಆಫ್ ನ್ಯೂಜಿ಼ಲೆಂಡ್ ಕ್ರಿಕೆಟ್” ಎನಿಸಿರುವ ಕಿವೀಸ್ ಮಹಿಳಾ ತಂಡದ ಮಾಜಿ ಆಟಗಾರ್ತಿ ಡೆಬ್ಬಿ ಹಾಕ್ಲಿ(1982-2000) ಅವರ 5 ವಿಶ್ವಕಪ್ ಆಡಿದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ವಿಶ್ವಕಪ್ ಗೆಲುವಿನ ಆಸೆ ಈಡೇರುವುದೇ?
ಎರಡು ದಶಕಗಳಿಂದ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿರುವ ಮಿಥಾಲಿ ರಾಜ್ ಅವರ ವಿಶ್ವಕಪ್ ಗೆಲುವಿನ ಕನಸು ಈವರೆಗೂ ಈಡೇರಿಲ್ಲ. ಈ ಹಿಂದೆ ಸಚಿನ್ ತೆಂಡುಲ್ಕರ್ ಅವರಿಗೂ ಸಹ 6ನೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶ್ವಕಪ್ ಪ್ರಶಸ್ತಿ ಕನಸು ನನಸಾಗಿತ್ತು. ಹೀಗಾಗಿ ಸಚಿನ್ ಅವರಂತೆ 6ನೇ ಏಕದಿನ ವಿಶ್ವಕಪ್ ಆಡುತ್ತಿರುವ ಮಿಥಾಲಿ ರಾಜ್ ಅವರ ವಿಶ್ವಕಪ್ ಗೆಲುವಿನ ಕನಸು ಈ ವಿಶ್ವಕಪ್ನಲ್ಲಿ ಸಾಕಾರಗೊಳ್ಳುವುದೇ ಕಾದು ನೋಡಬೇಕಿದೆ.
ಗೋಸ್ವಾಮಿಗೆ 5ನೇ ವಿಶ್ವಕಪ್
ಭಾರತ ಮಹಿಳಾ ಕ್ರಿಕೆಟ್ ತಂಡದ ಮತ್ತೋರ್ವ ಹಿರಿಯ ಆಟಗಾರ್ತಿ ಜುಲನ್ ಗೋಸ್ವಾಮಿ ಅವರಿಗೆ ಇದು 5ನೇ ವಿಶ್ವಕಪ್ ಪಂದ್ಯಾವಳಿಯಾಗಿದೆ. ತಂಡದ ಪ್ರಮುಖ ಬೌಲರ್ ಆಗಿರುವ ಗೋಸ್ವಾಮಿ, 2005ರಲ್ಲಿ ತಮ್ಮ ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರು.
ಸಚಿನ್ ಜೊತೆಗೂಡಿದ ಮಿಥಾಲಿ
ಭಾರತೀಯ ಕ್ರಿಕೆಟ್ನ ದಿಗ್ಗಜ ಕ್ರಿಕೆಟಿಗ, ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಹೆಚ್ಚು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಹಿರಿಮೆ ಹೊಂದಿದ್ದಾರೆ. 1992ರಿಂದ ಪ್ರಾರಂಭವಾದ ಸಚಿನ್ ತೆಂಡುಲ್ಕರ್ ಅವರ ವಿಶ್ವಕಪ್ ನಾಗಾಲೋಟ, 1996, 1999, 2003, 2007 ಹಾಗೂ 2011ರ ವಿಶ್ವಕಪ್ ಪ್ರಶಸ್ತಿ ಗೆಲುವಿನ ಸಂಭ್ರಮದೊಂದಿಗೆ ಅಂತ್ಯಗೊಂಡಿತು. 2011ರ ವಿಶ್ವಕಪ್ನಲ್ಲಿ ಆಡುವ ಮೂಲಕ ಸಚಿನ್ ತೆಂಡುಲ್ಕರ್, ಪಾಕಿಸ್ತಾನ ತಂಡದ ಮಾಜಿ ಆಟಗಾರ ಜಾವೇದ್ ವಿಯಾಂದಾದ್(1975-1996) ಅವರ 6 ಬಾರಿ ವಿಶ್ವಕಪ್ ಆಡಿದ ದಾಖಲೆಯನ್ನು ಸರಿಗಟ್ಟಿದ್ದರು.