ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ ಭಾರತ ಮಹಿಳಾ ತಂಡದ ಪೂಜಾ ವಸ್ತಾರ್ಕರ್ ಹಾಗೂ ಸ್ನೇಹ ರಾಣಾ, ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದ ಈ ಇಬ್ಬರು ಬ್ಯಾಟರ್ಗಳು ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪೂಜಾ ವಸ್ತಾರ್ಕರ್(67) ಹಾಗೂ ಸ್ನೇಹ ರಾಣ(53*) ರನ್ಗಳಿಸಿದರು. ಆ ಮೂಲಕ ಮೊದಲ ಬಾರಿಗೆ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 7 ಮತ್ತು 8ನೇ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೇ ಈ ಇಬ್ಬರು 7ನೇ ವಿಕೆಟ್ಗೆ ದಾಖಲೆಯ 122 ರನ್ಗಳ ಜೊತೆಯಾಟವಾಡಿದರು.
ಚೊಚ್ಚಲ ಏಕದಿನ ವಿಶ್ವಕಪ್ ಆಡುತ್ತಿರುವ ಈ ಇಬ್ಬರು ಆಟಗಾರ್ತಿಯರು, ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಒಂದು ಹಂತದಲ್ಲಿ 114 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇವರಿಬ್ಬರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ, 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು.