ಕ್ಯಾನ್ ಬೆರಾ: ರಾಚೆಲ್ ಹೇನ್ಸ್ (83 ರನ್) ಮತ್ತು ಮೆಗ್ ಲ್ಯಾನಿಂಗ್ (93 ರನ್) ಇವರುಗಳ ಭರ್ಜರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ವನಿತೆಯರ ಏಕೈಕ ಆಶಿಸ್ ಟೆಸ್ಟ್ ನ ಮೊದಲ ದಿನ ಇಂಗ್ಲೆಂಡ್ ವಿರುದ್ಧ ದಿನದ ಗೌರವ ತನ್ನದಾಗಿಸಿಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 7 ವಿಕೆಟ್ ಗೆ 327 ರನ್ ಕಲೆ ಹಾಕಿದ್ದಾರೆ. ಆತಿಥೇಯ ತಂಡದ ಪರ ಅನ್ನಾಬೆಲ್ ಸದರ್ಲ್ಯಾಂಡ್ (ಅಜೇಯ 7) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆರಂಭದಲ್ಲಿ ಮೂರು ವಿಕೆಟ್ ಗಳು ಪಟ ಪಟನೆ ಬಿದ್ದವು. ನಾಲ್ಕನೇ ವಿಕೆಟ್ ಗೆ ಆಸ್ಟ್ರೇಲಿಯಾ ಪರ ರಾಚೆಲ್ ಹೇನ್ಸ್ ಮತ್ತು ಮೆಗ್ ಲ್ಯಾನಿಂಗ್ ಸೊಗಸಾದ ಆಟದ ಪ್ರದರ್ಶನ ನೀಡಿದರು. ಈ ಜೋಡಿ 305 ಎಸೆತಗಳಲ್ಲಿ 169 ರನ್ ಕಲೆ ಹಾಕಿತು. ಮನಮೋಹಕ ಬ್ಯಾಟಿಂಗ್ ಮಾಡಿದ ಲ್ಯಾನಿಂಗ್ 170 ಸೆತಗಳಲ್ಲಿ 13 ಬೌಂಡರಿ ನೆರವಿನಿಂದ 93 ರನ್ ಬಾರಿಸಿ ಔಟ್ ಆದರು.
ಆರಂಭಿಕ ರಾಚೆಲ್ ಹೇನ್ಸ್ 180 ಸೆತಗಳಲ್ಲಿ 10 ಬೌಂಡರಿ ಸಹಾಯದಿಂದ 86 ರನ್ ಸಿಡಿಸಿ ಔಟ್ ಆದರು.
ಆರನೇ ವಿಕೆಟ್ ಗೆ ತಾಲಿಯಾ ಮೆಕ್‌ಗ್ರಾತ್ ಮತ್ತು ಆಶ್ಲೀ ಗಾರ್ಡ್ನರ್ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 134 ಎಸೆತಗಳಲ್ಲಿ 84 ರನ್ ಸೇರಿಸಿದರು. ಆಶ್ಲೀ ಗಾರ್ಡ್ನರ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿದರು. ತಾಲಿಯಾ ಮೆಕ್‌ಗ್ರಾತ್ 52 ರನ್ ಗಳಿಗೆ ಆಟ ಮುಗಿಸಿದರು.
ಇಂಗ್ಲೆಂಡ್ ಪರ ಕ್ಯಾಥರೀನ್ ಬ್ರಂಟ್, ನ್ಯಾಟ್ ಸ್ಕಿವರ್ ತಲಾ ಮೂರು ವಿಕೆಟ್ ಕಬಳಿಸಿದರು.