ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಸರಣಿ ಗೆಲುವು ಯಾರದ್ದು ಅನ್ನುವ ರೋಚಕತೆಯ ಜೊತೆಗೆ ಹಲವು ದಾಖಲೆಗಳು ಈ ಪಂದ್ಯದಲ್ಲಾಗುವ ಸಾಧ್ಯತೆ ಇದೆ.
1ನೇ ಸಲ: ಟೀಮ್ ಇಂಡಿಯಾ ಸರಣಿ ಗೆದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ಸರಣಿ ಗೆದ್ದ ದಾಖಲೆ ಬರೆಯಲಿದೆ. ಟೀಮ್ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹಲವು ಬಾರಿ ಸರಣಿ ಗೆದ್ದಿದ್ದರೂ, ಟಿ20ಯಲ್ಲಿ ಈ ಸಾಧನೆ ಮಾಡಲು ಆಗಿಲ್ಲ.
100 ಸಿಕ್ಸರ್: ಟೀಮ್ ಇಂಡಿಯಾದ ನಾಯಕ ರಿಷಬ್ ಪಂತ್ಗೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳ ಸಾಧನೆ ಮಾಡಲು ಇನ್ನು ಕೇವಲ 1 ಸಿಕ್ಸರ್ ಬೇಕಿವೆ. ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರು ಮಾದರಿಯ ಕ್ರಿಕೆಟ್ನಲ್ಲಿ ಇದುವರೆಗೂ 99 ಸಿಕ್ಸರ್ ಸಿಡಿಸಿದ್ದು, ಇನ್ನೊಂದು ಸಿಕ್ಸರ್ ಬಾರಿಸಿದರೇ ಪಂತ್ 100 ಅಂತಾರಾಷ್ಟ್ರೀಯ ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.
100ನೇ ಪಂದ್ಯ: ಕಿಲ್ಲರ್ ಮಿಲ್ಲರ್ ಖ್ಯಾತಿಯ ಡೇವಿಡ್ ಮಿಲ್ಲರ್, ಏಕಾಂಗಿಯಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಭಾರತದ ಎದುರಿನ 5ನೇ ಟಿ20 ಪಂದ್ಯವು ಡೇವಿಡ್ ಮಿಲ್ಲರ್ ಪಾಲಿಗೆ ನೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯವೆನಿಸಲಿದೆ.
ಡಿಕಾಕ್ಗೆ 72 ರನ್: ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಟ ರನ್ ಬಾರಿಸಿದ ದಾಖಲೆ ಜೆಪಿ ಡುಮಿನಿ ಹೆಸರಿನಲ್ಲಿದೆ. ಡುಮಿನಿ ಒಟ್ಟು 1934 ರನ್ ಬಾರಿಸಿದ್ದು, ಈ ದಾಖಲೆ ಹಿಂದಿಕ್ಕಲು 1863 ರನ್ ಗಳಿಸಿರುವ ಕ್ವಿಂಟನ್ ಡಿ ಕಾಕ್ಗೆ 72 ರನ್ಗಳ ಅಗತ್ಯವಿದ್ದು, ಡಿ ಕಾಕ್ ಈ ಸಾಧನೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಹಾರ್ದಿಕ್ಗೆ ಡಬಲ್ ಬೋನಸ್: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೂರು ಮಾದರಿಯ ಕ್ರಿಕೆಟ್ನಲ್ಲಿ ಇದುವರೆಗೂ 2488 ರನ್ ಬಾರಿಸಿದ್ದಾರೆ. ಇನ್ನು ಕೇವಲ 12 ರನ್ ಬಾರಿಸಿದರೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2500 ರನ್ ಪೂರೈಸಲಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇದುವರೆಗೂ 44 ಬೌಂಡರಿ ಬಾರಿಸಿದ್ದು, ಇನ್ನು ಕೇವಲ 6 ಬೌಂಡರಿ ಬಾರಿಸಿದರೇ 50 ಬೌಂಡರಿ ಬಾರಿಸಿದವರ ಕ್ಲಬ್ ಸೇರಲಿದ್ದಾರೆ.