ಎನ್ಕ್ರುಮಾ ಬೋನರ್(123) ತಾಳ್ಮೆ ಹಾಗೂ ಜವಾಬ್ದಾರಿಯ ಆಟದಿಂದ ಗಳಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಆಂಟಿಗುವಾದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ಗೆ ಬೋನರ್ ಗಳಿಸಿದ ಅದ್ಭುತ ಶತಕ ಆಸರೆಯಾಯಿತು. ಪರಿಣಾಮ 3ನೇ ದಿನದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 373 ರನ್ಗಳಿಸಿದ್ದು, 62 ರನ್ಗಳ ಮುನ್ನಡೆಯೊಂದಿಗೆ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕೆಳ ಕ್ರಮಾಂಕದಲ್ಲಿ ಬಂದ ವೀರಸಾಮಿ ಪೆರ್ಮೌಲ್(26*) ಅಜೇಯರಾಗುಳಿದಿದ್ದಾರೆ.
ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಗುರಿಯೊಂದಿಗೆ 3ನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್, ಎಚ್ಚರಿಕೆ ಹಾಗೂ ನಿಧಾನಗತಿಯ ಆಟಕ್ಕೆ ಮೊರೆ ಹೋಯಿತು. ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಎನ್ಕ್ರುಮಾ ಬೋನರ್, ತಮ್ಮ ಟೆಸ್ಟ್ ವೃತ್ತಿ ಜೀವನದ 2ನೇ ಶತಕ ಸಿಡಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 123 ರನ್ಗಳಿಸಿದ್ದ ಬೋನರ್, 3ನೇ ದಿನದ ಕೊನೆಯಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.
ಇದಕ್ಕೂ ಮುನ್ನ2ನೇ ದಿನದ ಮೊತ್ತ 4 ವಿಕೆಟ್ ನಷ್ಟಕ್ಕೆ 202 ರನ್ಗಳೊಂದಿಗೆ ದಿನದಾಟ ಆರಂಭಿಸಿದ ವಿಂಡೀಸ್, ಆರಂಭದಲ್ಲೇ ಹೋಲ್ಡರ್(45) ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಬೋನರ್ ಜೊತೆಯಾದ ಜೋಶುವಾ ಡಾ ಸಿಲ್ವಾ(32) ತಂಡಕ್ಕೆ ನೆರವಾದರು. 6ನೇ ವಿಕೆಟ್ಗೆ ಈ ಜೋಡಿ 73 ರನ್ಗಳ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ನಂತರ ಬಂದ ಅಲ್ಝಾರಿ ಜೋಸೆಫ್(2) ಬಹುಬೇಗನೆ ನಿರ್ಗಮಿಸಿದರೆ. ಕೀಮರ್ ರೋಚ್(15) ಹಾಗೂ ಪೆರ್ಮಾಲ್(26*) ಉಪಯುಕ್ತ ಕಾಣಿಕೆ ನೀಡಿದರು. ಕೆಳ ಕ್ರಮಾಂಕದ ಆಟಗಾರರಿಂದ ಬಂದ ಜೊತೆಯಾಟ, ವೆಸ್ಟ್ ಇಂಡೀಸ್ ತಂಡದ ಇನ್ನಿಂಗ್ಸ್ ಮುನ್ನಡೆಗೆ ಕಾರಣವಾಯಿತು.