ಮಲ್ಲಕಂಬ – ಯೋಗ-ಏಕಾಗ್ರತೆ- ಶರೀರದ ಸಮತೋಲನ ಕಾಪಾಡಿಕೊಂಡು ಮಾಡುವ ಭಾರತದ ವಿಶಿಷ್ಟ ಕ್ರೀಡೆ. ದೇಸಿ ಸೊಗಡಿನ ಸತ್ವ ಹೊಂದಿರುವ ಮಲ್ಲಕಂಬ ಭಾರತದ ಅತ್ಯಂತ ಪ್ರಾಚೀನ ಕ್ರೀಡೆ.
ರಾಮಾಯಣ ಕಾಲದಿಂದಲೂ ಆಚರಣೆಯಲ್ಲಿರುವ ಈ ಕ್ರೀಡೆ ಮೊದಲು ಉಲ್ಲೇಖಗೊಂಡಿದ್ದು ಚಾಲುಕ್ಯರ ದೊರೆ 3ನೇ ಸೋಮೇಶ್ವರ ರಚಿಸಿದ ಮಾನಸೋಲ್ಲಾಸ ಕೃತಿಯಲ್ಲಿ.
ಮರಾಠರ 2ನೇ ಪೇಶ್ವೆ ಬಾಜಿರಾವ್ ಕಾಲದಲ್ಲಿ ದೈಹಿಕ ತರಬೇತುದಾರರಾಗಿದ್ದ ಬಾಲಂಭಟ್ಟ ದೇವಧರ ಅವರ ವಿಶೇಷ ಕಾಳಜಿ ಹಾಗೂ ಶ್ರಮದಿಂದ ಮಲ್ಲಕಂಬ ಮತ್ತೆ ಪ್ರಚಲಿತವಾಯಿತು. ನಂತರದ ದಿನಗಳಲ್ಲಿ ಮಹಾರಾಷ್ಟ್ರ ಮಲ್ಲಕಂಬ ಕ್ರೀಡೆಯ ಪ್ರಮುಖ ಕೇಂದ್ರವಾಗಿ ರೂಪಗೊಂಡಿತು.
ಸ್ಥಿರ ಮಲ್ಲಕಂಬ, ನೇತಾಡುವ ಮಲ್ಲಕಂಬ ಹಾಗೂ ಹಗ್ಗ ಮಲ್ಲಕಂಬ ಈ ಮೂರು ಪ್ರಕಾರಗಳಲ್ಲಿ ಕ್ರೀಡಾಪಟುಗಳು ವಿವಿಧ ಯೋಗದ ಆಸನ, ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಇದುವೇ ಈ ಕ್ರೀಡೆಯ ಪ್ರಮುಖ ಆಕರ್ಷಣೆ.
ಇದಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದ್ದು ಬಾಲಗಂಗಾಧರ ತಿಲಕರು ಸ್ಥಾಪಿಸಿದ ಅಮರಾವತಿಯ ಹನುಮಾನ ವ್ಯಾಯಾಮ ಶಾಲೆಯಲ್ಲಿ. ಅಲ್ಲಿ ನಿರಂತರವಾಗಿ ಮಲ್ಲಕಂಬ ತರಬೇತಿ ನಡೆಯುತ್ತಿತ್ತು. ಶಾರೀರಿಕ ಕಸರತ್ತು, ಚಾಕಚಕ್ಯತೆಯಿಂದ ಕೂಡಿದ್ದ ಮಲ್ಲಕಂಬ ಕಾಲಕ್ರಮೇಣ ಗರಡಿ ಮನೆಯ ಅವಿಭಾಜ್ಯವಾಯಿತು.
ಹಿಟ್ಲರ್ ಎದುರು ಪ್ರದರ್ಶನ
1936ರಲ್ಲಿ ಜರ್ಮನಿಯಲ್ಲಿ ಒಲಂಪಿಕ್ ಪಂದ್ಯಗಳ ಪೂರ್ವ ಪ್ರದರ್ಶನದಲ್ಲಿ ಸರ್ವಾಧಿಕಾರಿ ಹಿಟ್ಲರ್ ಮಲ್ಲಕಂಬ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ಗಳಿಸಿದ್ದ. ಅಂದಿನಿಂದ ಜರ್ಮನಿಯಲ್ಲೂ ಮಲ್ಲಕಂಬದ ತರಬೇತಿ ಚುರುಕುಗೊಂಡಿತು. ಅನೇಕ ವಿಸ್ಮಯತೆಯಿಂದ ಕೂಡಿದ್ದ ಮಲ್ಲಕಂಬ ಕ್ರಮೇಣ ವಿದೇಶಿಗರನ್ನು ಆಕರ್ಷಿಸತೊಡಗಿತು. ಪ್ರಸ್ತುತ 25ಕ್ಕೂ ಅಧಿಕ ದೇಶಗಳಲ್ಲಿ ಮಲ್ಲಕಂಬ ಕ್ರೀಡೆ ಆಡಲಾಗುತ್ತದೆ.
ಮಲ್ಲಕಂಬ ಪ್ರಕಾರಗಳು
ಸ್ಥಿರ, ಹ್ಯಾಂಗಿಗ್ ಹಾಗೂ ರೋಪ್ ಈ ಮೂರು ಪ್ರಕಾರಗಳಲ್ಲಿ ಮಲ್ಲಕಂಬ ಆಡಲಾಗುತ್ತದೆ. ಸ್ಥಿರ ಮಲ್ಲಕಂಬದಲ್ಲಿ 8-10 ಅಡಿ ಉದ್ದದ ಮಲ್ಲಕಂಬದ ಮೇಲೆ ಕ್ರೀಡಾಪಟುಗಳು ವಿವಿಧ ಕಸರತ್ತು, ಯೋಗಾಸನ ಹಾಗೂ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಹ್ಯಾಂಗಿಗ್ ಅಥವಾ ನೇತಾಡುವ ಮಲ್ಲಕಂಬ ಇದು ಕೊಂಚ ಕಷ್ಟ ಹಾಗೂ ಅಷ್ಟೇ ಸಾಹಸಮಯ. ಇಲ್ಲಿ ಕಂಬ ಸದಾ ಅಲುಗಾಡುತ್ತಿರುತ್ತದೆ, ಅದರ ಮೇಲೆಯೇ ಪ್ರದರ್ಶಿಸಲು ಕ್ರೀಡಾಪಟುವಿಗೆ ಹೆಚ್ಚಿನ ಏಕಾಗ್ರತೆ ಹಾಗೂ ಶಾರೀರಿಕ ಕ್ಷಮತೆ ಅನಿವಾರ್ಯ. ಇನ್ನೂ ಹಗ್ಗದ ಮಲ್ಲಕಂಬ, 7-10 ಅಡಿ ಎತ್ತರದಲ್ಲಿ ಕಟ್ಟಿದ ರೋಪ್ ಸಹಾಯದಿಂದ ಮಲ್ಲಕಂಬ ಆಡಲಾಗುತ್ತದೆ.
ಭಾರತವೇ ಚಾಂಪಿಯನ್
2019ರಿಂದ ಆರಂಭವಾದ ವಿಶ್ವ ಮಲ್ಲಕಂಬ ಚಾಂಪಿಯನ್ಶಿಪ್ನಲ್ಲಿ ಇದುವರೆಗೂ ನಡೆದ ಎರಡು ಆವೃತ್ತಿಗಳಲ್ಲಿ ಭಾರತವೇ ಅಗ್ರಸ್ಥಾನ ಸಾಧಿಸಿದೆ. ಗುಂಪು ಹಾಗೂ ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ವಿಶೇಷ ಸಾಧನೆಗೈದಿದ್ದಾರೆ. ಸ್ಪೇನ್, ಜರ್ಮನಿ, ಇಟಲಿ, ಯುಎಸ್ಎ, ಇರಾನ್, ನಾರ್ವೆ, ಇಂಗ್ಲೆಂಡ್, ಫ್ರ್ಯಾನ್ಸ್, ಜಪಾನ್, ವಿಯೆಟ್ನಾಂ, ಮಲೇಷಿಯಾ, ಸಿಂಗಪೂರ್, ಬಹರೇನ್ ಮುಂತಾದ ದೇಶಗಳು ಈ ವರೆಗೆ ವಿಶ್ವ ಮಲ್ಲಕಂಬ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿವೆ.
ಮಲ್ಲಕಂಬ ಫೆಡರೆಶನ್
ಮಲ್ಲಕಂಬ ಕ್ರೀಡೆಗೆ ವ್ಯಾಪಕ ಪ್ರೋತ್ಸಾಹ ಹಾಗೂ ಪ್ರಚಾರ ಒದಗಿಸಲು ಮಲ್ಲಕಂಬ ಫೆಡರೆಶನ್ ಆಫ್ ಇಂಡಿಯಾ (ಒಈI) ಅಸ್ತಿತ್ವಕ್ಕೆ ಬಂದಿತು. ಇದರ ಅಧೀನದಲ್ಲಿ ದೇಶದ 26 ರಾಜ್ಯಗಳ ಮಲ್ಲಕಂಬ ಫೆಡರೆಶನ್ಗಳು ಕಾರ್ಯನಿರ್ವಹಿಸುತ್ತಿವೆ. ಕಾಲ ಕಾಲಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಲ್ಲಕಂಬ ಸ್ಪರ್ಧೆ ಫೆಡರೆಶನ್ನಿಂದ ಆಯೋಜಿಸಲಾಗುತ್ತದೆ.