ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಋತುವಿನಲ್ಲಿ, ಯುವಕರು ಮಿಂಚು ಹರಿಸುತ್ತಿದ್ದಾರೆ. ಪ್ರತಿ ತಂಡದ ಪರ ಯುವ ಆಟಗಾರರು ಗೆಲುವಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈನ ತಿಲಕ ವರ್ಮಾ, ಆರ್‍ಸಿಬಿಯ ರಜತ್ ಪಟೀದಾರ್, ಲಖನೌ ಪರ ಆಯುಷ್ ಬದೋನಿ ರನ್ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಸ್ಟಾರ್ ಆಟಗಾರರು ಕಳೆದುಕೊಂಡಿದ್ದ ಲಯವನ್ನು ಕಂಡುಕೊಳ್ಳಲು ಈ ಟೂರ್ನಿ ಮಹತ್ವದಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಶ್ರೀಲಂಕಾದ ಸ್ಪಿನ್ನರ್ ಮಹೀಷ್ ತೀಕ್ಷಣ ಅಮೋಘ ಆಟ ಪ್ರದರ್ಶಿಸಿದ್ದಾರೆ. ಕಳೆದ ಸೀಸನ್ ವರೆಗೂ ತಂಡದ ನೆಟ್ ಬೌಲರ್ ಆಗಿದ್ದ ಇವರು ತಮ್ಮ ಪಯಣವನ್ನು ಬಿಚ್ಚಿಟ್ಟಿದ್ದಾರೆ. ತಂಡದ ವೀಡಿಯೊ ಚಾಟ್‌ನಲ್ಲಿ, ಫಿಟ್‌ನೆಸ್‌ನಿಂದಾಗಿ ಕಂಗೆಟ್ಟಿದ್ದೆ. ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಮಾತನಾಡಿದ ನಂತರ, ಅದೃಷ್ಟ ಬದಲಾಗಿದೆ ಎಂದು ತಿಳಿಸಿದ್ದಾರೆ.

“ನಾನು ಒಂದು ಸಮಯದಲ್ಲಿ 117 ಕೆಜಿ ಇದ್ದೆ. ನನ್ನನ್ನು ನಾನು ಫಿಟ್ ಆಗಿರಲು ಶ್ರಮಿಸಿದೆ. ಅಲ್ಲದೆ ಯೋ-ಯೋ ಟೆಸ್ಟ್ ಪಾಸ್ ಆಗುವುದು ಸವಾಲಾಗಿತ್ತು. 2020ರಲ್ಲಿ ನಾನು ನನ್ನನ್ನ ಫಿಟ್ನೆಸ್ ಬಗ್ಗೆ ಕೆಲಸ ಮಾಡಲು ಆರಂಭಿಸಿದೆ. ಹೀಗಾಗಿ ನನ್ನ ಫಿಟ್ನೆಸ್ ಅನ್ನು ಸರಿಯಾದ ಮಟ್ಟಕ್ಕೆ ತರಲು ಸಾಧ್ಯವಾಯಿತು. ಆ ನಂತರ ಇನ್ನಷ್ಟು ಕೆಲಸ ಮಾಡಲು ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ.

“2020 ರಲ್ಲಿ, ನಾನು ಅಜಂತಾ ಮೆಂಡಿಸ್ ಅವರೊಂದಿಗೆ ಮಾತನಾಡಿದೆ ಮತ್ತು 2022 ರಲ್ಲಿ ನಾನು ಎಂಎಸ್ ಧೋನಿ ಅವರೊಂದಿಗೆ ಚರ್ಚೆ ನಡೆಸಿದೆ. ನಾನು ಕಳೆದ ವರ್ಷ ನೆಟ್ ಬೌಲರ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡೆ. ಧೋನಿ ನನ್ನಲ್ಲಿನ ಕ್ಷಮತೆಯನ್ನು ಗುರುತಿಸಿ ಹರಾಜಿನಲ್ಲಿ ಖರೀದಿಸಿದರು” ಎಂದಿದ್ದಾರೆ.

2017- 18ನೇ ಸಾಲಿನಲ್ಲಿ 19 ವರ್ಷದೊಳಗಿನವರ ತಂಡದಲ್ಲಿದ್ದ ನಾನು ಫಿಟ್‌ನೆಸ್ ಪರೀಕ್ಷೆಯಲ್ಲಿ ಹಲವು ಬಾರಿ ಫೇಲ್ ಆದ ಕಾರಣ ಆಡುವ ಅವಕಾಶ ಸಿಗಲಿಲ್ಲ. 2019ರಲ್ಲಿ 10 ಪಂದ್ಯಗಳನ್ನಾಡಿದ್ದೆ. ಮೂರು ದಿನದ ಮ್ಯಾಚ್‌ನಲ್ಲಿ ವಾಟರ್ ಬಾಯ್ ಆಗಿ ಉಳಿಯಬೇಕಾಗಿತ್ತು, ನಂತರವೇ ನನಗೆ ಅರ್ಥವಾಯಿತು, ನಾನು ಹೀಗೆ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಆಗದು ಎಂಬುದನ್ನು ಮನವರಿಕೆ ಮಾಡಿಕೊಂಡು ದೈಹಿಕ ಕ್ಷಮತೆಯತ್ತ ಕೆಲಸ ಮಾಡಿದ್ದೇನೆ” ಎಂದು ಮಹೀಷ್ ತಿಳಿಸಿದ್ದಾರೆ.