ಇಂಗ್ಲೆಂಡ್ ತಂಡ ಟೆಸ್ಟ್ ಕೋಚ್ ಹುಡುಕಾಟದಲ್ಲಿದೆ. ಇಂಗ್ಲೆಂಡ್ನ ಮಾಜಿ ಆಟಗಾರರು ಈ ಹುದ್ದೆಗೆ ಒಲವು ತೋರಿಲ್ಲ. ಆಸ್ಟ್ರೇಲಿಯನ್ನರಿಗೆ ಕೋಚ್ ಹುದ್ದೆ ಕೊಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಇಷ್ಟವಿಲ್ಲ. ದಕ್ಷಿಣ ಅಫ್ರಿಕಾದ ಮಾಜಿ ಆಟಗಾರರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇದೆಲ್ಲದರ ಮಧ್ಯೆ ನ್ಯೂಜಿಲೆಂಡ್ನ ಮಾಜಿ ಆಟಗಾರ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಹೆಡ್ ಕೋಚ್ ಬ್ರೆಂಡನ್ ಮೆಕಲಂ ಇಂಗ್ಲೆಂಡ್ ತಂಡದ ಟೆಸ್ಟ್ ಕೋಚ್ ಆಗುವ ಸಾಧ್ಯತೆ ಹೆಚ್ಚಿದೆ.
ಮೆಕಲಂ ಈಗಾಗಲೇ ಲಾರ್ಡ್ಸ್ನಲ್ಲಿ ನಡೆದ ಸಂದರ್ಶನವನ್ನು ಎದುರಿಸಿದ್ದಾರೆ. ಇಸಿಬಿ ಅಧಿಕಾರಿಗಳು ಮೆಕಲಂ ಬಗ್ಗೆ ಸ್ಪಷ್ಟತೆ ಹೊಂದಿರುವುದರಿಂದ ಮುಂದಿನ ವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಮೆಕಲಂ ಕಳೆದ 3 ವರ್ಷಗಳಿಂದ ಕೆಕೆಆರ್ ತಂಡದ ಹೆಡ್ ಕೋಚ್ ಆಗಿದ್ದಾರೆ. ಈ ಹಿಂದೆ ಯಾವುದೇ ತಂಡಕ್ಕೂ ಕೋಚ್ ಆದ ಅನುಭವ ಮೆಕಲಂಗಿಲ್ಲ. ಆದರೆ ಅವರ ಯೋಚನೆ ಮತ್ತು ಪ್ಲಾನ್ಗಳು ವಿಭಿನ್ನವಾಗಿರುವುದರಿಂದ ಮೆಕಲಂಗೆ ಅವಕಾಶ ನೀಡಲು ಇಸಿಬಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೆಕಲಂ ಕೋಚ್ ಆಗಿ ಅಧಿಕಾರ ಸ್ವೀಕರಿಸಿದರೆ ನ್ಯೂಜಿಲೆಂಡ್ ವಿರುದ್ಧವೇ ತನ್ನ ಮೊದಲ ಸರಣಿಯನ್ನು ಆಡಬೇಕಾಗುತ್ತದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜೂನ್ 2 ರಂದು ಆರಂಭವಾಗಲಿದೆ.