ಭಾರತದ ಸ್ಟಾರ್ ಆಟಗಾರ ಲಕ್ಷ್ಯ ಸೇನ್ ಹಾಗೂ ಮಾಳ್ವಿಕಾ ಬನ್ಸೊದ್ ಅವರು ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯ ಸಾಧಿಸಿ, ಮುಂದಿನ ಹಂತ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ 14-21, 21-16, 21-18 ರಿಂದ ಚೋಯ್ ಜಿ ಹೂನ್ ಅವರನ್ನು ಒಂದು ಗಂಟೆ ಎರಡು ನಿಮಿಷದ ಹೋರಾಟದಲ್ಲಿ ಮಣಿಸಿದರು. ಮೊದಲ ಗೇಮ್ ನಲ್ಲಿ ಹಿನ್ನಡೆ ಅನುಭವಿಸಿದ ಲಕ್ಷ್ಯ ಎರಡನೇ ಗೇಮ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಅಲ್ಲದೆ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಸೇನ್ 21-16 ರಿಂದ ಗೇಮ್ ಗೆದ್ದು ಬೀಗಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಲಕ್ಷ್ಯ ಸೇನ್ ಅಬ್ಬರದ ಆಟ ಪ್ರದರ್ಶಿಸಿ ಮುನ್ನಡೆ ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಳ್ವಿಕಾ 20-22, 22-20, 21-10 ರಿಂದ ಚೀನಾದ ಹುನ್ ಯು ವಿರುದ್ಧ 56 ನಿಮಿಷದ ಹೋರಾಟದಲ್ಲಿ ಗೆಲುವಿನ ನಗೆ ಬೀರಿದರು. ಮಾಳ್ವಿಕಾ ಸಹ ಮೊದಲ ಗೇಮ್ ನಲ್ಲಿ ಸೋಲು ಕಂಡರೂ, ಎರಡು ಹಾಗೂ ಮೂರನೇ ಗೇಮ್ ನಲ್ಲಿ ಸ್ಥಿರ ಪ್ರದರ್ಶನ ನೀಡಿ, ಎದುರಾಳಿ ಆಟಗಾರ್ತಿಗೆ ಶಾಕ್ ನೀಡಿದರು.
ಇನ್ನೊಂದು ಪುರಷರ ಸಿಂಗಲ್ಸ್ ಪಂದ್ಯದಲ್ಲಿ ಎಚ್.ಎಸ್ ಪ್ರಣಯ್ 17-21, 7-21ರಿಂದ ಮಲೇಷ್ಯಾದ ಚಿಮ್ ಜೂನ್ ವೇ ವಿರುದ್ಧ ನಿರಾಸೆ ಅನುಭವಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸೋಲು ಕಂಡಿತು.