ಕ್ಯಾನ್ ಬೆರ್: ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಆತಿಥೇಯ ಆಸ್ಟ್ರೆಲಿಯಾದ ವನಿತೆಯರು ಇಲ್ಲಿ ನಡೆದಿರುವ ಮಹಿಳಾ ಏಕೈಕ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಕನಸು ಕಾಣುತ್ತಿದೆ.
ಶುಕ್ರವಾರ 7 ವಿಕೆಟ್ ಗೆ 327 ರನ್ ಗಳಿಂದ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 9 ವಿಕೆಟ್ ಗೆ 337 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 87 ಓವರ್ ಗಳಲ್ಲಿ 8 ವಿಕೆಟ್ ಗೆ 235 ರನ್ ಸೇರಿಸಿದೆ. ಶತಕ ಸಿಡಿಸಿರುವ ಹೀದರ್ ನೈಟ್ (ಅಜೇಯ 127) ಹಾಗೂ ಸೋಫಿ ಎಕ್ಲೆಸ್ಟೋನ್ (ಅಜೇಯ 27) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿಲು ಇನ್ನು 102 ರನ್ ಸೇರಿಸಬೇಕಿದೆ.
ಆಸ್ಟ್ರೇಲಿಯಾದ ಪರ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆತಿಥೇಯ ತಂಡ 9 ವಿಕೆಟ್ ಗೆ 337 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಇಂಗ್ಲೆಂಡ್ ಪರ ಕ್ಯಾಥರೀನ್ ಬ್ರಂಟ್ 60 ರನ್ ನೀಡಿ 5 ವಿಕೆಟ್ ಹಾಗೂ ನ್ಯಾಟ್ ಸಿವರ್ 41ರನ್ ನೀಡಿ 3 ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್ ನಲ್ಲಿ ನ್ಯಾಟ್ ಸಿವರ್ (15), ಸೋಫಿಯಾ ಡಂಕ್ಲಿ (15), ಆಮಿ ಜೋನ್ಸ್ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಲ್ಲದೆ ಜೊತೆಯಾಟಗಳು ಬಾರದೆ ಇದ್ದಿದ್ದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತು.
ಒಂಬತ್ತನೇ ವಿಕೆಟ್ ಗೆ ಸೋಫಿ ಎಕ್ಲೆಸ್ಟೋನ್ ಮತ್ತು ಹೀದರ್ ನೈಟ್ ಜೊತೆಗೂಡಿ ತಂಡಕ್ಕೆ ನೆರವಾದರು. ಈ ಜೋಡಿ ಇಂಗ್ಲೆಂಡ್ ಪರ ಮನಮೋಹಕ ಆಟವನ್ನು ಆಡಿತು. ಈ ಜೋಡಿ 125 ಎಸೆತಗಳಲ್ಲಿ 66 ರನ್ ಗಳ ಅಜೇಯ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಗಿದೆ. ನಾಯಕಿ ಹೀದರ್ 249 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 127 ರನ್ ಸೇರಿಸಿದರೆ, ಸೋಫಿ ಎಕ್ಲೆಸ್ಟೋನ್ ಅಜೇಯ 27 ರನ್ ಸಿಡಿಸಿದ್ದಾರೆ.
ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್ ತಲಾ ಎರಡು ವಿಕೆಟ್ ಕಬಳಿಸಿದರು.