ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಪದೇ ಪದೇಗಾಯಗೊಳ್ಳುತ್ತಿರುವುದು ಬಿಸಿಸಿಐ ತಲೆನೋವು ಹೆಚ್ಚಿಸಿದೆ. ತಂಡದ ಆಯ್ಕೆ ವೇಳೆ ಫಿಟ್ ಆಗಿರುವ ರಾಹುಲ್ ಸರಣಿಯ ಆರಂಭದ ವೇಳೆಗೆ ಅಲಭ್ಯರಾಗುತ್ತಿರುವ ಬಗ್ಗೆ ಬಿಸಿಸಿಐ ಹೆಚ್ಚು ತಲೆ ಕೆಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭಕ್ಕೆ ಮುನ್ನ ಗಾಯಗೊಂಡಿದ್ದ ರಾಹುಲ್ ಈಗ ಇಂಗ್ಲೆಂಡ್ ಪ್ರವಾಸಕ್ಕೆ ಲಭ್ಯರಾಗ್ತಾರಾ ಅನ್ನುವ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ಒಳಗಾಗಿರುವ ರಾಹುಲ್ ಸದ್ಯ ವಿರಾಮದಲ್ಲಿದ್ದಾರೆ. ಈ ವಾರದ ಕೊನೆಯಲ್ಲಿ ಫಿಟ್ನೆಸ್ ಪರೀಕ್ಷೆಗ ಒಳಗಾಗಬಹುದು ಎಂದು ವರದಿಯಾಗಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದಲ್ಲಿ ಮಾತ್ರವೇ ಆರಂಭಿಕ ಬ್ಯಾಟ್ಸ್ ಮನ್ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ, ಹಾಗೇನಾದರೂ ಫೇಲ್ ಆದಲ್ಲಿ ಜುಲೈ ಮೊದಲ ವಾರದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯುವ ಸಾಧ್ಯತೆ ಇದೆ. ರಾಹುಲ್ ಫಿಟ್ನೆಸ್ ಪರೀಕ್ಷೆ ಜೂನ್ 18 ರಂದು ನಡೆಯಲಿದೆ.
