ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿರುವ ನ್ಯೂಜಿ಼ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸತತ ಎರಡು ಪಂದ್ಯಗಳ ಸೋಲಿನ ಕಹಿ ಅನುಭವಿಸಿರುವ ಕಿವೀಸ್ನ ಆಲ್ರೌಂಡರ್ ಮೈಕಲ್ ಬ್ರೇಸ್ವೆಲ್, ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಮೈಕಲ್ ಬ್ರೇಸ್ವೆಲ್ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದರ ಬಗ್ಗೆ ನ್ಯೂಜಿ಼ಲೆಂಡ್ ಕ್ರಿಕೆಟ್ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ. ಬ್ರೇಸ್ವೆಲ್ ಅವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರ್ಯಾಪಿಡ್ ಆಂಟಿಜನ್ ಟೆಸ್ಟ್(RAT) ನಡೆಸಲಾಯಿತು. ಉಭಯ ತಂಡಗಳ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್ ಜೂ.23ರಿಂದ ಆರಂಭಗೊಳ್ಳಲಿದ್ದು, ಬ್ರೇಸ್ವೆಲ್ 5 ದಿನಗಳ ಕಾಲ ಐಸೋಲೇಷನ್ನಲ್ಲಿ ಇರಲಿದ್ದಾರೆ.
ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡಕ್ಕೆ ಅಲ್ಪಮೊತ್ತದ ಕಾಣಿಕೆ ನೀಡಿದ್ದ ಮೈಕಲ್ ಬ್ರೇಸ್ವೆಲ್, ಎರಡು ಇನ್ನಿಂಗ್ಸ್ನಿಂದ 49 ಮತ್ತು 25 ರನ್ಗಳಿಸಿದ್ದರು. ಇನ್ನು ಬೌಲಿಂಗ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ್ದ ಮೈಕಲ್ ಬ್ರೇಸ್ವೆಲ್ 3/62 ವಿಕೆಟ್ ಪಡೆದಿದ್ದರು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಸರಣಿ ಆರಂಭದಿಂದಲೂ ನ್ಯೂಜಿ಼ಲೆಂಡ್ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನ್ಯೂಜಿ಼ಲೆಂಡ್ನ ಹೆನ್ರಿ ನಿಕೋಲಸ್, ವೇಗದ ಬೌಲರ್ ಬ್ಲೇರ್ ಟಿಕ್ನರ್ ಹಾಗೂ ಬೌಲಿಂಗ್ ಕೋಚ್ ಶೇನ್ ಜರ್ಗೆನ್ಸನ್ ಕೋವಿಡ್-19 ಸೋಲಿಗೆ ತುತ್ತಾಗಿದ್ದರು. ಉಭಯ ತಂಡಗಳ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್ ಜೂ.23ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಸರಣಿ ಗೆದ್ದಿರುವ ಇಂಗ್ಲೆಂಡ್ 2-0 ಮುನ್ನಡೆ ಕಾಯ್ದುಕೊಂಡಿದೆ.