ಕರ್ನಾಟಕ ಬ್ಯಾಟ್ಸಮನ್ಗಳ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ರೈಲ್ವೇಸ್ ತಂಡ ದಿಟ್ಟ ಪ್ರತ್ಯುತ್ತರ ನೀಡುವಲ್ಲಿ ಯಶಸ್ವಿಯಾಗಿದ್ದು, ಉಭಯ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಎಲೈಟ್ ʼಸಿʼ ಗುಂಪಿನ ಪಂದ್ಯದ 2ನೇ ದಿನದಾಟದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶನ ನೀಡಿದವು.
ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 481 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ರೈಲ್ವೇಸ್, 2ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 213 ರನ್ಗಳಿಸಿದೆ. 268 ರನ್ಗಳ ಹಿನ್ನಡೆ ಹೊಂದಿರುವ ರೈಲ್ವೇಸ್ ಪರ ಅರೀಂದಮ್ ಘೋಷ್(78*) ಹಾಗೂ ಮೊಹಮ್ಮದ್ ಸೈಫ್(8*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಂದ್ಯದ 3ನೇ ದಿನದಾಟ ಕುತೂಹಲ ಮೂಡಿಸಿದ್ದು, ಉಭಯ ತಂಡಗಳು ಇನ್ನಿಂಗ್ಸ್ ಮುನ್ನಡೆಗಾಗಿ ಪ್ರಬಲ ಪೈಪೋಟಿ ನಡೆಸಲಿವೆ.
ಕರ್ನಾಟಕ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 481 ರನ್ಗಳಿಗೆ ಕಟ್ಟಿಹಾಕಿದ ರೈಲ್ವೈಸ್ ಉತ್ತಮ ಆರಂಭವನ್ನೇ ಪಡೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಮೃನಾಲ್ ದೇವಧಾರ್(56) ಹಾಗೂ ವಿವೇಕ್ ಸಿಂಗ್(59) ಆಕರ್ಷಕ ಅರ್ಧಶತಕದೊಂದಿಗೆ ಮೊದಲ ವಿಕೆಟ್ಗೆ 110 ರನ್ಗಳಿಸಿ ಸುಭದ್ರ ಅಡಿಪಾಯ ಹಾಕಿಕೊಟ್ಟರು. ನಂತರ ಕಣಕ್ಕಿಳಿದ ಶಿವಂ ಚೌಧರಿ(8) ಬ್ಯಾಟಿಂಗ್ ವೈಫಲ್ಯ ಅನುಭವಿಸಿ ನಿರಾಸೆ ಮೂಡಿಸಿದರು. ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರೀಂದಮ್ ಘೋಷ್ ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಘೋಷ್(78*) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಕರ್ನಾಟಕದ ಪರ ಕೃಷ್ಣಪ್ಪ ಗೌತಮ್(71ಕ್ಕೆ 3) ತಮ್ಮ ಚಾಣಾಕ್ಷ ಬೌಲಿಂಗ್ ಮೂಲಕ ರೈಲ್ವೇಸ್ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು.
ಇದಕ್ಕೂ ಮುನ್ನ ಮೊದಲ ದಿನದ ಮೊತ್ತ 5 ವಿಕೆಟ್ಗಳ ನಷ್ಟಕ್ಕೆ 392 ರನ್ಗಳಿಂದ ದಿನದಾಟ ಆರಂಭಿಸಿದ ಕರ್ನಾಟಕ, ಮೊದಲ ಇನ್ನಿಂಗ್ಸ್ನಲ್ಲಿ 481 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಂತ್ಯಕ್ಕೆ 140 ರನ್ಗಳಿಸಿ ಅಜೇಯರಾಗುಳಿದಿದ್ದ ಕೆ.ವಿ. ಸಿದ್ದಾರ್ಥ್, ಕೇವಲ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೃಷ್ಣಪ್ಪ ಗೌತಮ್, ಕೇವಲ 32 ಬಾಲ್ಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನೊಂದಿಗೆ 52 ರನ್ಗಳಿಸಿ, ತಂಡಕ್ಕೆ ನೆರವಾದರು. ರೈಲ್ವೇಸ್ ಪರ ಯುವರಾಜ್ ಸಿಂಗ್ 5 ವಿಕೆಟ್ ಪಡೆದು ಮಿಂಚಿದರೆ, ಶಿವಂ ಚೌಧರಿ 2, ಅಮಿತ್ ಮಿಶ್ರಾ ಹಾಗೂ ಅವಿನಾಶ್ ಯಾದವ್ ತಲಾ 1 ವಿಕೆಟ್ ಪಡೆದರು.