Kapil Dev- M S Dhoni -ಕಪಿಲ್ ದೇವ್ ಜೊತೆ ಗಾಲ್ಫ್ ಆಡಿದ ಧೋನಿ…!
ಕಪಿಲ್ ದೇವ್.. 1983ರ ವಿಶ್ವಕಪ್ ಹೀರೋ. ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ನಾಯಕ. ಕಪಿಲ್ ದೇವ್ ಅಂದ್ರೆ ಆಕ್ರಮಣಕಾರಿ ಪ್ರವೃತ್ತಿಯ ಆಟಗಾರ. ವೇಗದ ಬೌಲರ್ ಜೊತೆಗೆ ಹೊಡಿಬಡಿ ಆಟಗಾರನೂ ಹೌದು. ಭಾರತ ಕ್ರಿಕೆಟ್ ತಂಡದ ಆಲ್ ಟೈಮ್ ಗ್ರೇಟ್ ಆಲ್ ರೌಂಡರ್.
ಮಹೇಂದ್ರ ಸಿಂಗ್ ಧೋನಿ. ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ನಾಯಕ. ಏಕದಿನ ವಿಶ್ವಕಪ್ ಗೆದ್ದ ಭಾರತದ ಎರಡನೇ ನಾಯಕ. ಇನ್ನು ಧೋನಿ ಕ್ಯಾಪ್ಟನ್ಸಿ ಮತ್ತು ಆಟದ ಬಗ್ಗೆ ಹೆಚ್ಚು ಏನು ಹೇಳುವುದು ಬೇಡ. ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇದೀಗ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಭೇಟಿಯಾಗಿದ್ದಾರೆ. ಆದ್ರೆ ಅದು ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಾಗಿ ಗಾಲ್ಫ್ ಅಂಗಣದಲ್ಲಿ.
ಹೌದು, ಗುರುಗ್ರಾಮ್ ನಲ್ಲಿ ಕಪಿಲ್ ದೇವ್ ಗ್ರ್ಯಾಂಟ್ ಥಾರ್ನಟನ್ ಆಹ್ವಾನಿತ ಗಾಲ್ಫ್ ಟೂರ್ನಿಯಲ್ಲಿ ಧೋನಿ ಕೂಡ ಭಾಗವಹಿಸಿದ್ದರು. ಅಲ್ಲದೆ ಧೋನಿ ಜೊತೆ ಗಾಲ್ಫ್ ಆಡಿರುವ ಫೋಟೋವನ್ನು ಕಪಿಲ್ ದೇವ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಆಟಗಾರರು ಗಾಲ್ಫ್ ಆಟಗಾರರಾಗಿ ಬದಲಾಗಿದ್ದಾರೆ ಎಂದು ಕಪಿಲ್ ದೇವ್ ಬರೆದುಕೊಂಡಿದ್ದಾರೆ.
ಹಾಗಂತ ಧೋನಿ ಇದೇ ಮೊದಲ ಬಾರಿ ಗಾಲ್ಫ್ ಅಂಗಣದಲ್ಲಿ ಕಾಣಿಸಿಕೊಂಡಿಲ್ಲ. ಈ ಹಿಂದೆ ಐಪಿಎಲ್ ಟೂರ್ನಿಯ ವೇಳೆ ಅಂದ್ರೆ 2019ರಲ್ಲಿ ಧೋನಿ ಮತ್ತು ಕೇದಾರ್ ಜಾಧವ್ ಅವರ ಜೊತೆ ಧೋನಿ ಗಾಲ್ಫ್ ಅಂಗಣದಲ್ಲಿ ಕಾಣಿಸಿಕೊಂಡಿದ್ದರು.