ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಕಂಡಿದೆ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್, ಇಬ್ಬರು ಆರಂಭಿಕರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದು, ಎರಡು ವಿಕೆಟ್ ಪಡೆಯುವ ಮೂಲಕ ಅನುಭವಿ ಬೌಲರ್ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸದೊಂದು ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಬೌಲಿಂಗ್ ಅಸ್ತ್ರವಾಗಿರುವ ಜೇಮ್ಸ್ ಆಂಡರ್ಸನ್, ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ 101ನೇ ವಿಕೆಟ್ ಪಡೆದಿದ್ದಾರೆ. ಅಲ್ಲದೇ ಹೋಮ್ ಗ್ರೌಂಡ್ ನಲ್ಲಿ ಎದುರಾಳಿ ತಂಡವೊಂದರ ವಿರುದ್ಧ 100ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಆಂಡರ್ಸನ್ ಪಾತ್ರರಾಗಿದ್ದಾರೆ. ಬರ್ಮಿಂಗ್ಹ್ಯಾಮ್ನ ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್ ಶುಭ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಜೇಮ್ಸ್ ಆಂಡರ್ಸನ್ ಈ ಸಾಧನೆ ಮಾಡಿದರು.
ಇದರೊಂದಿಗೆ ತವರಿನ ನೆಲದಲ್ಲಿ ಎದುರಾಳಿ ತಂಡವೊಂದರ ವಿರುದ್ಧ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಸಾಲಿನಲ್ಲಿ ಜೇಮ್ಸ್ ಆಂಡರ್ಸನ್, 101* ವಿಕೆಟ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾದ ಸ್ಪಿನ್ ಚಾಣಾಕ್ಷ ಹರ್ಭಜನ್ ಸಿಂಗ್, ಆಸ್ಟ್ರೇಲಿಯಾ ತಂಡದ ವಿರುದ್ಧ 86 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದರೆ. ಇಂಗ್ಲೆಂಡ್ ತಂಡದ ಮತ್ತೋರ್ವ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾ ತಂಡದ ವಿರುದ್ಧ 84 ವಿಕೆಟ್ ಪಡೆಯುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ, ಆರಂಭಿಕ ಆಘಾತ ಕಂಡಿದೆ. ಟೀಂ ಇಂಡಿಯಾ ಪರ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪುಜಾರ ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಪರಿಣಾಮ ಭಾರತ 46 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.