ಭರವಸೆಯ ಆಟಗಾರ ದೀಪಕ್ ಹೂಡಾ ಅವರ ಅಮೋಘ ಆಟದ ನೆರವಿನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಪೂರ್ಣ ಅಂಕ ಕಲೆ ಹಾಕಿತು.
ಸೋಮವಾರ ನಡೆದ ಪಂದ್ಯದಲ್ಲಿ ಜೈಪುರ್ 36-31 ರಿಂದ ಜೈಂಟ್ಸ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಜೈಪುರ್ ಪ್ರಸಕ್ತ ಋತುವಿನಲ್ಲಿ 8ನೇ ಜಯ ದಾಖಲಿಸಿದ್ದು, 51 ಅಂಕ ಸೇರಿಸಿ ಐದನೇ ಸ್ಥಾನ ಹೊಂದಿದೆ. ಇನ್ನು ಗುಜರಾತ್ ಜೈಂಟ್ಸ್ 44 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಮೊದಲಾವಧಿಯ ಆಟದಲ್ಲಿ ಜೈಪುರ್ ಭರ್ಜರಿ ಪ್ರದರ್ಶನವನ್ನು ನೀಡಿ ಅಂಕಗಳನ್ನು ಕೊಳ್ಳೆ ಹಡೆಯಿತು. ಈ ಅವಧಿಯಲ್ಲಿ ಪ್ಯಾಂಥರ್ಸ್ ದಾಳಿಯಲ್ಲಿ 10 ಅಂಕ ಪಡೆದರೆ, ಎದುರಾಳಿ 11 ಅಂಕ ಸೇರಿಸಿತು. ಇನ್ನು ರಕ್ಷಣಾ ವಿಭಾಗದಲ್ಲಿ ವಿಜೇತ ತಂಡ 8 ಅಂಕ ತನ್ನದಾಗಿಸಿಕೊಂಡಿತು. ಜೈಂಟ್ಸ್ 3 ಅಂಕ ಸೇರಿಸಿತು. ಒಂದು ಬಾರಿ ಆಲೌಟ್ ಆದ ಜೈಂಟ್ಸ್ ಬೋನಸ್ ಅಂಕವನ್ನು ಎದುರಾಳಿಗೆ ನೀಡಿತು.
ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಅವಧಿಯಲ್ಲಿ ಜೈಪರ್ ತಂಡದ ರಣ ತಂತ್ರವನ್ನು ಮೆಟ್ಟಿ ನಿಂತ ಗುಜರಾತ್ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿದರೂ, ಗೆಲುವಿಗೆ ಬೇಕದಾಷ್ಟು ಅಂಕಗಳನ್ನು ಕಲೆ ಹಾಕಲಿಲ್ಲ. ಉಭಯ ತಂಡಗಳು ಕೊನೆಯ 20 ನಿಮಿಷದಲ್ಲಿ ದಾಳಿಯಲ್ಲಿ 9 ಅಂಕ ಸೇರಿಸಿದವು. ಎರಡೂ ತಂಡಗಳ ರಕ್ಷಣಾ ವಿಭಾಗ ಈ ಹಂತದಲ್ಲಿ ಸಮನಾಗಿ ಕಂಡಿತು. ಈ ಅವಧಿಯಲ್ಲಿ ಜೈಪುರ್ ಆಲೌಟ್ ಆಗಿ, ಜೈಂಟ್ಸ್ ಬೋನಸ್ ಅಂಕವನ್ನು ನೀಡಿತು.