ಬೆಂಗಳೂರು: ಅನುಭವಿ ಆಟಗಾರ ದೀಪಕ್ ಹೂಡಾ ಅವರ ಅಮೋಘ ಆಟದ ನೆರವಿನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 90 ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆ.ಸಿ ತಂಡವನ್ನು ಮಣಿಸಿ 9ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಗುರುವಾರ ನಡೆದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ 36-30 ರಿಂದ ದೆಹಲಿ ತಂಡವನ್ನು ಮಣಿಸಿತು. ಈ ಮೂಲಕ ಜೈಪುರ್ ಆಡಿದ 14 ಪಂದ್ಯಗಳಲ್ಲಿ 45 ಅಂಕ ಕಲೆ ಹಾಕಿದ್ದು 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಸೋತರೂ ದಬಾಂಗ್ ದೆಹಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಮೊದಲಾವಧಿಯ ಪಂದ್ಯದಲ್ಲಿ ಜೈಪುರ್ 21-15 ರಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಬಾಂಗ್ ತಂಡ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದವು. ಈ ಅವಧಿಯಲ್ಲಿ ದಾಳಿಯಲ್ಲಿ ದೆಹಲಿ ಅಬ್ಬರಿಸಿದರೂ ಯಶ ಕಾಣಲಿಲ್ಲ.
ಒಟ್ಟಾರೆ ಪಂದ್ಯದಲ್ಲಿ ಜೈಪುರ್ 41 ಬಾರಿ ದಾಳಿ ನಡೆಸಿ 19, ದಬಾಂಗ್ ಇಷ್ಟೇ ದಾಳಿಯಲ್ಲಿ 16 ಅಂಕ ಸೇರಿಸಿತು. ರಕ್ಷಣಾ ವಿಭಾಗದಲ್ಲಿ ಜೈಪುರ್ ಮನಮೋಹಕ ಪ್ರದರ್ಶನ ನೀಡಿತು. ಅಲ್ಲದೆ 11 ಅಂಕ ಬಾಚಿಕೊಂಡಿತು. ಆದರೆ ದೆಹಲಿ ಎರಡು ಬಾರಿ ಸೂಪರ್ ಟ್ಯಾಕಲ್ ಮಾಡಿ ಮಿಂಚಿತು.
ಸ್ಟಾರ್ ಆಟಗಾರ ದೀಪಕ್ 22 ಬಾರಿ ಎದುರಾಳಿ ಕೋರ್ಟ್‌ಗೆ ಹೋಗಿ 12 ಅಂಕ ಸೇರಿಸಿದರು. ಅರ್ಜುನ್ ದೇಶ್ವಾಲ್ 6 ಅಂಕ ಪಡೆದರು. ಪರಾಜಿತ ತಂಡದ ಪರ ಆಲ್ ರೌಂಡರ್ ವಿಜಯ್ 16 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.