ಸಂಘಟಿತ ಆಟದ ಪ್ರದರ್ಶನ ನೀಡಿದ ತಮಿಳು ತಲೈವಾಸ್ ತಂಡ 43-25 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 91ನೇ ಪಂದ್ಯದಲ್ಲಿ ಮಣಿಸಿತು.
ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ತಲೈವಾಸ್ ಅಮೋಘ ಆಟವಾಡಿತು. ಮೊದಲಾವಧಿಯಲ್ಲಿ ರೈಡ್ ಹಾಗೂ ಟ್ಯಾಕಲ್ ನಲ್ಲಿ ಮಿಂಚು ಹರಿಸಿದ ತಲೈವಾಸ್ ಆರ್ಭಟ ನಡೆಸಿತು. ತಲೈವಾಸ್ ಆರಂಭಿಕ 20 ನಿಮಿಷದಲ್ಲಿ ರೈಡ್ ನಲ್ಲಿ 22, ಟ್ಯಾಕಲ್ ನಲ್ಲಿ 12 ಅಂಕಗಳನ್ನು ಮತ್ತು ಎದುರಾಳಿ ತಂಡವನ್ನು ಆಲೌಟ್ ಮಾಡಿ ಎರಡು ಅಂಕ ಗಳಿಸಿತು. ಎರಡನೇ ಅವಧಿಯಲ್ಲೂ ಈ ಆರ್ಭಟ ಮುಂದುವರಿಸಿದ ತಲೈವಾಸ್ ಅಂಕಗಳ ಬೇಟೆ ನಡೆಸಿತು. ಈ ವೇಳೆಯಲ್ಲೂ ಒಂದು ಬಾರಿ ಟೈಟಾನ್ಸ್ ತಂಡ ಆಲೌಟ್ ಆಯಿತು.
ತಮಿಳು ತಲೈವಾಸ್ ತಂಡದ ಭರವಸೆಯ ರೈಡರ್ ಗಳಾದ ಮಂಜಿತ್ 9, ಅಜಿಂಕ್ಯ ಪವಾರ್ 10 ಅಂಕಗಳಿಸಿ ಜಯದಲ್ಲಿ ಮಿಂಚಿದರು. ರಕ್ಷಣಾ ಆಟಗಾರ ಸಾಗರ್ 10 ಅಂಕಗಳನ್ನು ಕಲೆ ಹಾಕಿ ಗಮನ ಸೆಳೆದರು. ಪರಾಜಿತ ತಂಡದ ಪರ ಗಾಲಾ ರಾಜು 9, ಆದರ್ಶ್ ಟಿ 4 ಅಂಕಗಳನ್ನು ಪೇರಿಸಿದರು.
ತಲೈವಾಸ್ ಒಟ್ಟಾರೆ 28 ಬಾರಿ ಎದುರಾಳಿಯನ್ನು ಹಿಡಿಯುವ ಯತ್ನದಲ್ಲಿ 16ರಲ್ಲಿ ಯಶ ಕಂಡಿತು. ಇನ್ನು ಟೈಟಾನ್ಸ್ 24 ಯತ್ನಗಳಲ್ಲಿ ಒಂಬತ್ತು ಅಂಕ ಸೇರಿಸಿತು.