ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಎರಡನೇ ಅವಧಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ 1-2 ರಿಂದ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಸೋಲು ಕಂಡಿತು.
ನಾರ್ತ್ ಈಸ್ಟ್ ತಂಡ ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಬ್ರೌನ್ ಸೀನಿಯರ್ (74ನೇ ನಿಮಿಷ) ಹಾಗೂ ದನ್ಮಾವಿಯಾ (80ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಬೆಂಗಳೂರು ಪರ ಕ್ಲಿಟನ್ (66ನೇ ನಿಮಿಷ) ಗೋಲು ಬಾರಿಸಿ ಸೋಲಿನಲ್ಲಿ ಮಿಂಚಿದರು.
ಮೊದಲಾವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವ ಯೋಜನೆ ಫಲಿಸಿಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ತಂಡ 66ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಬ್ಬರಿಸಿತು. ತನ್ ಎಡಗಡೆ ಬಂದ ಚೆಂಡಿಗೆ ಕ್ಲಿಟನ್ ಉತ್ತಮ ಕಾಲ್ಚಳಕದ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಇವರು ಎದುರಾಳಿ ಗೋಲ್ ಕೀಪರ್ ಅನ್ನು ವಂಚಿಸುವಲ್ಲಿ ಸಫಲರಾದರು.
ಈ ಅವಧಿಯಲ್ಲಿ ನಾರ್ತ್ ಈಸ್ಟ್ ಕೊನೆಯ ಕ್ಷಣದಲ್ಲಿ ಎರಡು ಗೋಲು ಬಾರಿಸಿ ಮಿಂಚಿತು. ಅಲ್ಲದೆ ಜಯ ಸಾಧಿಸಿತು. ಈ ಗೆಲುವಿನ ಮೂಲಕ ನಾರ್ತ್ ಈಸ್ಟ್ ತಂಡ 13 ಅಂಕಗಳೊಂದಿಗೆ ಕೊನೆಯ ಎರಡನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರು 23 ಅಂಕಗಳೊಂದಿಗೆ ಆರನೇ ಸ್ಥಾನ ಹೊಂದಿದೆ.