ಇಂದು ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ (ಬಿಎಫ್ ಸಿ) ಹಾಗೂ (ಜೆಮ್ಶಡ್ ಪುರ್ ಎಫ್ ಸಿ (ಜೆಎಫ್ ಸಿ) ತಂಡಗಳು ಕಾದಾಟ ನಡೆಸಲಿವೆ. ಲೀಗ್ ಹಂತದ ಕೊನೆಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಬೆಂಗಳೂರು ತಂಡ ಮುಂದಿನ ಹಂತದಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು, ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಬೆಂಗಳೂರು ತಂಡ ಆಡಿದ 14 ಪಂದ್ಯಗಳಲ್ಲಿ 5 ಗೆಲುವು, 5 ಸೋಲು, 4 ಡ್ರಾ ಸಾಧಿಸಿದ್ದು 20 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಜೆಎಫ್ ಸಿ 12 ಪಂದ್ಯಗಳಲ್ಲಿ 6 ಗೆಲುವು, 4 ಸೋಲು, 2 ಡ್ರಾ ಸಾಧಿಸಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಕೇರಳ ತಂಡವನ್ನು ಮಣಿಸಿರುವ ಬಿಎಫ್ ಸಿ ವಿಶ್ವಾಸದಿಂದ ಮುನ್ನುಗುತ್ತಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆಲುವು ದಾಖಲಿಸಿದರೆ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲಿದೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹುಟ್ಟಿಸಿದೆ. ಬೆಂಗಳೂರು ತಂಡದ ಪರ ಗರಿಷ್ಠ ಗೋಲು ದಾಖಲಿಸಿದವರ ಪಟ್ಟಿಯಲ್ಲಿ ಕ್ಲಿಟನ್ ಸಿಲ್ವಾ ಕಾಣಿಸಿಕೊಂಡಿದ್ದು ಇವರು ಆಡಿದ 13 ಪಂದ್ಯಗಳಲ್ಲಿ 5 ಗೋಲು ಸಿಡಿಸಿದ್ದಾರೆ. ಜೆಎಫ್ ಸಿ ತಂಡದ ಪರ ಗ್ರೆಗ್ ಸ್ಟೀವರ್ಟ್ ಇಷ್ಟೇ ಗೋಲನ್ನು 12 ಪಂದ್ಯಗಳಲ್ಲಿ ಬಾರಿಸಿದ್ದಾರೆ.