ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ರೋಚಕ ಘಟ್ಟ ತಲುಪಿದ್ದು, ಮುಂದಿನ ಹಂತ ತಲುಪುವ ಕನಸು ಎಲ್ಲ ತಂಡಗಳದ್ದಾಗಿದೆ. ಶುಕ್ರವಾರ ನಡೆದ ಮೂರನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ 43-23 ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಆರಂಭದಿಂದಲೂ ಪಾಟ್ನಾ ಅಂಕಗಳಿಕೆಯ ಮೇಲೆ ಚಿತ್ತ ನೆಟ್ಟಿತು. ಈ ಅವಧಿಯಲ್ಲಿ ಪೈರೇಟ್ಸ್ 18-16 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಮೊದಲ 20 ನಿಮಿಷದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು.
ಇನ್ನು ಎರಡನೇ ಹಂತದಲ್ಲಿ ಗುಜರಾತ್ ಪುಟಿದೇಳುವ ಆಸೆ ಫಲಿಸಲಿಲ್ಲ. ಪಾಟ್ನಾ ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು. ಈ ವೇಳೆ ಗುಜರಾತ್ ಎರಡು ಬಾರಿ ಅಂಗಳ ಖಾಲಿ ಮಾಡಿತು.
ಪಾಟ್ನಾ ಪರ ಗುಮನ್ ಸಿಂಗ್ 11, ಟ್ಯಾಕಲ್ ನಲ್ಲಿ ಮೊಹಮ್ಮದ್ರೇಜಾ ಎಂಟು ಅಂಕಗಳನ್ನು ಕಲೆ ಹಾಕಿದರು. ಈ ಗೆಲುವಿನೊಂದಿಗೆ ಪಾಟ್ನಾ ಆಡಿದ 15 ಪಂದ್ಯಗಳಲ್ಲಿ 10 ಜಯ, 4 ಸೋಲು, 1 ಡ್ರಾ ಕಂಡಿದ್ದು, 55 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಗುಜರಾತ್ ಇಷ್ಟೇ ಪಂದ್ಯಗಳಿಂದ 38 ಅಂಕ ಸೇರಿಸಿದ್ದು 11ನೇ ಸ್ಥಾನದಲ್ಲಿದೆ.