ಅತಿಥೇಯ ಐರ್ಲೆಂಡ್ ಬ್ಯಾಟ್ಸ್ಮನ್ಗಳ ಕೆಚ್ಚೆದೆಯ ಹೋರಾಟದ ನಡುವೆಯೂ ಕೊನೆ ಹಂತದಲ್ಲಿ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ, 2ನೇ ಟಿ20 ಪಂದ್ಯದಲ್ಲಿ 4 ರನ್ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಡುಬ್ಲಿನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಐರ್ಲೆಂಡ್ ಅದ್ಭುತ ಬ್ಯಾಟಿಂಗ್ ನಡುವೆಯೂ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ಗಳಿಸುವ ಮೂಲಕ 4 ರನ್ಗಳ ವಿರೋಚಿತ ಸೋಲು ಕಂಡಿತು. ಈ ಗೆಲುವಿನೊಂದಿಗೆ ಭಾರತ 2 ಪಂದ್ಯಗಳ ಸರಣಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.
![IRE v IND 2nd T20I: ಐರ್ಲೆಂಡ್ ಕೆಚ್ಚೆದೆಯ ಹೋರಾಟಕ್ಕೆ ಸಿಗದ ಜಯ: ಟೀಂ ಇಂಡಿಯಾಕ್ಕೆ 4 ರನ್ಗಳ ಗೆಲುವು 3 Sanju Hooda](http://sportskarnataka.com/wp-content/uploads/2022/06/Sanju-Hooda.png)
ಹೂಡ-ಸ್ಯಾಮ್ಸನ್ ಅಬ್ಬರ:
ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಇಶಾನ್ ಕಿಶಾನ್(3) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 2ನೇ ವಿಕೆಟ್ಗೆ ಜೊತೆಯಾದ ಸಂಜೂ ಸ್ಯಾಮ್ಸನ್ 77 ರನ್(42 ಬಾಲ್, 9 ಬೌಂಡರಿ, 4 ಸಿಕ್ಸ್) ಹಾಗೂ ದೀಪಕ್ ಹೂಡ 104 ರನ್(57 ಬಾಲ್, 9 ಬೌಂಡರಿ, 6 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಐರ್ಲೆಂಡ್ ತಂಡದ ಅನನುಭವಿ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ, 2ನೇ ವಿಕೆಟ್ಗೆ ದಾಖಲೆಯ 176 ರನ್ ಜೊತೆಯಾಟವಾಡಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಹೂಡ, ಟಿ20 ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂಜೂ ಸ್ಯಾಮ್ಸನ್ ಸಹ ಟಿ20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದರು.
ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಟೀಮ್ ಇಂಡಿಯಾ ನಾಟಕೀಯ ಕುಸಿತ ಕಂಡಿತು. ಸೂರ್ಯಕುಮಾರ್ ಯಾದವ್(15) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ(15*) ಅಲ್ಪಮೊತ್ತ ಕಲೆಹಾಕಿದರೆ. ದಿನೇಶ್ ಕಾರ್ತಿಕ್(0), ಅಕ್ಸರ್ ಪಟೇಲ್(0), ಹರ್ಷಲ್ ಪಟೇಲ್(0) ಮೊದಲ ಬಾಲ್ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ಐರ್ಲೆಂಡ್ ಪರ ಮಾರ್ಕ್ ಅಡೈರ್(43/3), ಕ್ರೇಗ್ ಯಂಗ್(35/2) ಹಾಗೂ ಜೊಶುವಾ ಲಿಟಿಲ್(38/2) ವಿಕೆಟ್ ಪಡೆದರು.
![IRE v IND 2nd T20I: ಐರ್ಲೆಂಡ್ ಕೆಚ್ಚೆದೆಯ ಹೋರಾಟಕ್ಕೆ ಸಿಗದ ಜಯ: ಟೀಂ ಇಂಡಿಯಾಕ್ಕೆ 4 ರನ್ಗಳ ಗೆಲುವು 4 India](http://sportskarnataka.com/wp-content/uploads/2022/06/India.png)
ಐರ್ಲೆಂಡ್ ಕೆಚ್ಚೆದೆಯ ಆಟ:
ಟೀಮ್ ಇಂಡಿಯಾ ನೀಡಿದ 226 ರನ್ಗಳ ಬೃಹತ್ ಮೊತ್ತ ಚೇಸ್ ಮಾಡಿದ ಐರ್ಲೆಂಡ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಪೌಲ್ ಸ್ಟಿರ್ಲಿಂಗ್ 40(18) ಹಾಗೂ ಆಂಡ್ರೋ ಬಲ್ಬರ್ನಿ 60(37) ಬಿರುಸಿನ ಅರ್ಧಶತಕದ ಮೂಲಕ ಮೊದಲ ವಿಕೆಟ್ಗೆ 5.4 ಓವರ್ಗಳಲ್ಲಿ 72 ರನ್ಗಳಿಸಿ ಸ್ಪೋಟಕ ಆರಂಭ ನೀಡಿದರು. ಆದರೆ ನಂತರದಲ್ಲಿ ಬಂದ ಗ್ರೇಥ್ ಡಿಲ್ನೆ(0) ಹಾಗೂ ಲೊರ್ಕೆನ್ ಟಕ್ಕರ್(5) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಟೆಕ್ಟರ್ 39(28) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜಾರ್ಜ್ ಡೊಕ್ರೆಲ್ 34*(16) ಹಾಗೂ ಮಾರ್ಕ್ ಅಡೇರ್ 23*(12) ಸ್ಪೋಟಕ ಆಟವಾಡಿದರು. ಕೊನೆ ಹಂತದಲ್ಲಿ ಭಾರತದ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ ಕೆಚ್ಚೆದೆಯ ಹೋರಾಟ ನಡೆಸಿದರು ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಐರ್ಲೆಂಡ್ 221 ರನ್ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸುವ ಮೂಲಕ 4 ರನ್ಗಳ ಸೋಲೊಪ್ಪಿಕೊಂಡಿತು.
ಭಾರತದ ಪರ ಭುವನೇಶ್ವರ್, ಹರ್ಷಲ್ ಪಟೇಲ್, ಉಮ್ರಾನ್ ಮಲ್ಲಿಕ್ ಹಾಗೂ ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು. ಎರಡು ಪಂದ್ಯಗಳ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ದೀಪಕ್ ಹೂಡ, ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.