ದೀಪಕ್ ಹೂಡ(104) ಸ್ಪೋಟಕ ಶತಕ ಹಾಗೂ ಸಂಜೂ ಸ್ಯಾಮ್ಸನ್(77) ಬಿರುಸಿನ ಅರ್ಧಶತಕದ ನೆರವಿನಿಂದ ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 227 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಡುಬ್ಲಿನ್‌ನ ದಿ ವೀಲೆಜ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಭಾರತದ ಪರ ದೀಪಕ್ ಹೂಡ(104) ಹಾಗೂ ಸಂಜೂ ಸ್ಯಾಮ್ಸನ್(77) ಅಮೋಘ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು.

ಹೂಡ ಚೊಚ್ಚಲ ಶತಕದ ಅಬ್ಬರ:
ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಇಶಾನ್ ಕಿಶಾನ್(3) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 2ನೇ ವಿಕೆಟ್‌ಗೆ ಜೊತೆಯಾದ ಸಂಜೂ ಸ್ಯಾಮ್ಸನ್ 77 ಹಾಗೂ ದೀಪಕ್ ಹೂಡ 104 ರನ್(57 ಬಾಲ್, 9 ಬೌಂಡರಿ, 6 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಐರ್ಲೆಂಡ್ ತಂಡದ ಅನನುಭವಿ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ, ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್ ವೇಗವನ್ನ ಹೆಚ್ಚಿಸಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಹೂಡ, ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು. ಇನ್ನಿಂಗ್ಸ್‌ನ ಕೊನೆವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದ ಹೂಡ, 104 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಸಂಜೂ ಅರ್ಧಶತಕದ ಮಿಂಚು:
ಒಂದೆಡೆ ದೀಪಕ್ ಹೂಡ ಸ್ಪೋಟಕ ಆಟವಾಡಿದರೆ ಇವರಿಗೆ ಉತ್ತಮ ಸಾಥ್ ನೀಡಿದ ಸಂಜೂ ಸ್ಯಾಮ್ಸನ್ 77 ರನ್(42 ಬಾಲ್, 9 ಬೌಂಡರಿ, 4 ಸಿಕ್ಸ್) ಬಿರುಸಿನ ಆಟವಾಡಿದರು. ಆರಂಭಿಕನಾಗಿ ಕಣಕ್ಕಿಳಿದ ಸಂಜೂ ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ ಸಂಜೂ ಸ್ಯಾಮ್ಸನ್ ಹಾಗೂ ದೀಪಕ್ ಹೂಡ 2ನೇ ವಿಕೆಟ್‌ಗೆ ದಾಖಲೆಯ 176 ರನ್ ಜೊತೆಯಾಟವಾಡಿದರು.

ಸಂಜೂ ಸ್ಯಾಮ್ಸನ್ ಔಟಾದ ಬಳಿಕ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್(15) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ನಾಟಕೀಯ ಕುಸಿತ ಕಂಡ ಭಾರತದ ಪರ ನಾಯಕ ಹಾರ್ದಿಕ್ ಪಾಂಡ್ಯ(15*) ಅಲ್ಪಮೊತ್ತ ಕಲೆಹಾಕಿದರೆ. ದಿನೇಶ್ ಕಾರ್ತಿಕ್(0), ಅಕ್ಸರ್ ಪಟೇಲ್(0), ಹರ್ಷಲ್ ಪಟೇಲ್(0) ಮೊದಲ ಬಾಲ್‌ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. ಐರ್ಲೆಂಡ್ ಪರ ಮಾರ್ಕ್ ಅಡೈರ್(43/3), ಕ್ರೇಗ್ ಯಂಗ್(35/2) ಹಾಗೂ ಜೊಶುವಾ ಲಿಟಿಲ್(38/2) ವಿಕೆಟ್ ಪಡೆದರು.