IPL VS PSL – ಪಾಕಿಸ್ತಾನಕ್ಕೆ ಐಪಿಎಲ್ ಅಂದ್ರೆ ಹೊಟ್ಟೆ ಉರಿ..! ಬರೀ ಕನಸು ಕಾಣ್ತಾ ಇರೀ..!

ಐಪಿಎಲ್ ನ ಹವಾನೇ ಅಂತಹುದ್ದು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ರೂ ಪರವಾಗಿಲ್ಲ. ಐಪಿಎಲ್ ನಲ್ಲಿ ಆಡುವ ಅವಕಾಶ ಸಿಕ್ರೆ ಸಾಕು ಎಂಬ ಮನೋಭಾವನೆ ಅನೇಕ ಆಟಗಾರರಲ್ಲಿದೆ.
ಹಾಗಂತ ಐಪಿಎಲ್ ಅಂದ್ರೆ ದುಡ್ಡು ಸಿಗುತ್ತೆ ಅಂತಲ್ಲ. ಇಲ್ಲಿ ದುಡ್ಡಿನ ಜೊತೆಗೆ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಅನಾವರಣಗೊಳಿಸುವ ವೇದಿಕೆ ಕೂಡ ಹೌದು.
ಅದಕ್ಕಾಗಿಯೇ ವಿದೇಶಿ ಆಟಗಾರರು ರಾಷ್ಟ್ರೀಯ ತಂಡವನ್ನು ಬಿಟ್ಟು ಐಪಿಎಲ್ ನಲ್ಲಿ ಆಡಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ.
ಇನ್ನು ನಮ್ಮ ಪಕ್ಕದ ಪಾಕಿಸ್ತಾನದ ಆಟಗಾರರಿಗೆ ನಮ್ಮ ಐಪಿಎಲ್ ನಲ್ಲಿ ಆಡುವ ಅವಕಾಶವಿಲ್ಲ. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರು ಆಡಿದ್ದರು. ಆನಂತರ ಇಂಡೋ ಪಾಕ್ ರಾಜಕೀಯ ಬಿಕ್ಕಟ್ಟಿನಿಂದಾಗಿ ಪಾಕ್ ಆಟಗಾರರು ಭಾರತಕ್ಕೆ ಕಾಲಿಟ್ಟಿಲ್ಲ.
ಆದ್ರೆ ಪಾಕಿಸ್ತಾನಕ್ಕೆ ಐಪಿಎಲ್ ನ ಯಶಸ್ಸು ಕಂಡಾಗ ಹೊಟ್ಟೆ ಉರಿ ಜಾಸ್ತಿನೇ ಇದೆ. ಐಪಿಎಲ್ ಗೆ ಪರ್ಯಾವಾಗಿ ಪಾಕ್ ನಲ್ಲಿ ಪಿಎಸ್ ಎಲ್ ಟೂರ್ನಿಯನ್ನು ಆಯೋಜನೆ ಮಾಡಿತ್ತು. ಆದ್ರೆ ಅದು ಅಂದುಕೊಂಡ ಮಟ್ಟಿಗೆ ಯಶಸ್ಸು ಪಡೆದುಕೊಳ್ಳಲಿಲ್ಲ. ಐಪಿಎಲ್ ಗೆ ಹೋಲಿಕೆ ಮಾಡಿದ್ರೆ ವಿಶ್ವದ ಯಾವುದೇ ದೇಸಿ ಟಿ-20 ಲೀಗ್ ಕೂಡ ಯಶ ಸಾಧಿಸಿಲ್ಲ. ಅಷ್ಟರ ಮಟ್ಟಿಗೆ ಐಪಿಎಲ್ ವಿಸ್ತಾರವನ್ನು ಪಡೆದುಕೊಂಡಿದೆ.
ಹೀಗಾಗಿ ಪಾಕಿಸ್ತಾನದ ಕ್ರಿಕೆಟಿಗರು, ಪತ್ರಕರ್ತರು ಐಪಿಎಲ್ ಬಗ್ಗೆ ಒಂದಲ್ಲ ಒಂದು ಮಾತು ಹೇಳಿಕೊಂಡು ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಈಗ ಶೋಯಿಬ್ ಅಖ್ತರ್ ಕೂಡ ಹೊಸ ಸೇರ್ಪಡೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಐಪಿಎಲ್ ನಲ್ಲಿ ಆಡಿದ್ರೆ ಕನಿಷ್ಠ 15-20 ಕೋಟಿ ರೂಪಾಯಿಗೆ ಖರೀದಿ ಆಗ್ತಾರೆ ಅಂತ ಶೋಯಿಬ್ ಅಖ್ತರ್ ಹೇಳಿದ್ದಾರೆ.
ಶೋಯಿಬ್ ಅಖ್ತರ್ ಮಾತು ಕೇಳಿದಾಗ ಏನು ಅನ್ನಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಯಾಕಂದ್ರೆ ಐಪಿಎಲ್ ನಲ್ಲಿ ಭಾರತದ ಸರ್ವ ಶ್ರೇಷ್ಠ ಆಟಗಾರರಿಗೆ ಸಿಕ್ಕಿದ್ದು 17 ಕೋಟಿ ರೂಪಾಯಿ. ಇನ್ನು ಪಾಕ್ ಬಿಟ್ಟು ವಿದೇಶಿ ಆಟಗಾರರು 15ಕೋಟಿಗಿಂತ ಹೆಚ್ಚು ಯಾರಿಗೂ ಕೊಟ್ಟಿಲ್ಲ. ಅಷ್ಟಕ್ಕೂ ಫ್ರಾಂಚೈಸಿ ಮಾಲೀಕರು ದಡ್ಡರೇನಲ್ಲ. ಹಾಗಂತ ಬಾಬರ್ ಅಝಮ್ ಗೆ ಅಷ್ಟೊಂದು ದುಡ್ಡು ಕೊಡುವುದು ತಪ್ಪು ಅಂತನೂ ಅಲ್ಲ. ಯಾಕಂದ್ರೆ ಬಾಬರ್ ಅದ್ಭುತ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ 15-20 ಕೋಟಿ ರೂಪಾಯಿ ನೀಡುವಷ್ಟು ದೊಡ್ಡ ಆಟಗಾರನು ಅಲ್ಲ. ಇಲ್ಲಿ ಫ್ರಾಂಚೈಸಿಗಳು ಪ್ರತಿ ಆಟಗಾರನಿಗೆ ಕೊಡುವ ದುಡ್ಡಿನಲ್ಲೂ ಲೆಕ್ಕ ಹಾಕಿಕೊಂಡಿರುತ್ತೆ. ಒಂದು ವೇಳೆ ಬಾಬರ್ ಅಝಮ್ 20 ಕೋಟಿ ರೂಪಾಯಿ ಬೆಲೆ ಬಾಳುವ ಆಟಗಾರನಾಗಿದ್ರೆ, ಪಿಎಸ್ ಎಲ್ ನಲ್ಲಿ ಎಷ್ಟು ಹಣ ಪಡೆಯುತ್ತಾರೆ ? ಬಾಬರ್ ಗೆ ಪಿಸಿಬಿ ಎಷ್ಟು ದುಡ್ಡು ಕೊಡುತ್ತದೆ ?
ಐಪಿಎಲ್ ನಲ್ಲಿ ಹಣವಿದೆ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ಖರ್ಚು ಮಾಡುವ ಫ್ರಾಂಚೈಸಿಗಳು ಇಲ್ಲ. ಸುಮ್ಮನೆ ಪಾಕ್ ಕ್ರಿಕೆಟಿಗರಿಗೆ ಬಿಲ್ಡಪ್ ಕೊಡುವುದನ್ನು ಬಿಟ್ಟು ತಮ್ಮ ದೇಶದಲ್ಲಿ ನಡೆಯುವ ಪಿಎಸ್ ಎಲ್ ಟೂರ್ನಿಯನ್ನು ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದ್ದು.

ಈ ಹಿಂದೆ ಪಾಕ್ ಪತ್ರಕರ್ತನೊಬ್ಬ ಘಾತನ ವೇಗಿ ಶಾಹೀನ್ ಆಫ್ರಿದಿ ಐಪಿಎಲ್ ನಲ್ಲಿ 200 ಕೋಟಿ ರೂಪಾಯಿಗೆ ಹರಾಜು ಆಗುತ್ತಿದ್ದರು ಎಂದು ಟ್ವಿಟ್ ಮಾಡಿದ್ದ. ಆನಂತರ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಮೀಜ್ ರಾಝಾ ಕೂಡ ಐಪಿಎಲ್ ವಿರುದ್ಧವಾಗಿ ಮಾತನಾಡಿದ್ದರು. ಪಿಎಸ್ ಎಲ್ ನಲ್ಲಿ ಬಿಡ್ಡಿಂಗ್ ನಿಯಮವನ್ನು ಜಾರಿಗೆ ತಂದ್ರೆ ಐಪಿಎಲ್ ನಲ್ಲಿ ಯಾರು ಆಡ್ತಾರೆ ಅನ್ನೋದನ್ನು ನೋಡೋಣ ಎಂದು ಹೇಳಿದ್ದರು. IPL VS PSL – Babar Azam will go for Rs 15-20cr in IPL auction – Shoaib Akhtar
ಅಂದ ಹಾಗೇ ಪಾಕ್ ಕ್ರಿಕೆಟಿಗರು ಅಂದುಕೊಂಡಂತೆ ಐಪಿಎಲ್ ನಡೆಯುತ್ತಿಲ್ಲ. ಐಪಿಎಲ್ ಹಿಂದೆ ಮಾಸ್ಟರ್ ಪ್ಲಾನ್ ಇದೆ. ಇಲ್ಲಿ ಒಂದೊಂದು ರೂಪಾಯಿಗೂ ಬೆಲೆ ಇದೆ. ಬಾಯಿಗೆ ಬಂದಂತೆ ಮಾತನಾಡಿಕೊಂಡು ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುತ್ತಿಲ್ಲ. ಪಕ್ಕಾ ಲೆಕ್ಕಚಾರ… ಪಕ್ಕಾ ಪ್ಲಾನಿಂಗ್ ಇರುತ್ತದೆ. ಹೀಗಾಗಿಯೇ ಐಪಿಎಲ್ ದೊಡ್ಡ ಉದ್ಯಮವಾಗಿ ಬೆಳೆದಿರುವುದು. ನೆನಪಿಡಿ… ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಬಿಕ್ಕಟ್ಟು ಎಲ್ಲಿಯವರೆಗೆ ಕೊನೆಗೊಳ್ಳುವುದಿಲ್ಲವೋ ಅಲ್ಲಿಯ ತನಕ ಐಪಿಎಲ್ ನಲ್ಲಿ ಪಾಕಿಸ್ತಾನ ಆಟಗಾರರು ಆಡುವುದಿಲ್ಲ. ಅಲ್ಲಿಯವರೆಗೆ ಐಪಿಎಲ್ ಹಂಗೆ ಹಿಂಗೆ.. ಐಪಿಎಲ್ ನಲ್ಲಿ ಪಾಕ್ ಕ್ರಿಕೆಟಿಗನಿಗೆ ಅಷ್ಟು ದುಡ್ಡು ಸಿಗುತ್ತಿತ್ತು ಅಂತ ಕನಸು ಕಾಣ್ತಾ ಇರಬೇಕು ಅಷ್ಟೇ..!