ಐಪಿಎಲ್ ಟೂರ್ನಿ ಎಂದರೆ ದಾಖಲೆಗಳು, ದಾಖಲೆಗಳು ಅಂದರೆ ಐಪಿಎಲ್ ಟೂರ್ನಿ. ಈಗ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕಿಗಾಗಿ ನಡೆದ ಬಿಡ್ಡಿಂಗ್ ಕ್ರಿಕೆಟ್ ವಲಯ ಮಾತ್ರವಲ್ಲ ಬೇರೆ ಕ್ರೀಡೆಗಳನ್ನು ಕೂಡ ಹುಬ್ಬೇರುವಂತೆ ಮಾಡಿದೆ.
2023ರಿಂದ 2027ರ ವರೆಗಿನ 5 ವರ್ಷಗಳ ವರೆಗೆ ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕನ್ನು ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಿದೆ. ಟಿವಿ ಹಾಗೂ ಡಿಜಿಟಲ್ ಹಕ್ಕು ಒಟ್ಟು 44,075 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಟಿವಿ ಹಕ್ಕನ್ನು ಸೋನಿ ಖರೀದಿಸಿದರೆ, ಡಿಜಿಟಲ್ ಹಕ್ಕನ್ನು ರಿಲಯನ್ಸ್ ಜಿಯೋ ಖರೀದಿಸಿದೆ ಎಂದು ವರದಿಯಾಗಿದೆ.
ಮುಂದಿನ 5 ವರ್ಷಗಳಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದೆ. ಒಟ್ಟು ಮೊತ್ತ ಲೆಕ್ಕಹಾಕಿದರೆ ಐಪಿಎಲ್ ಪ್ರಸಾರ ಹಕ್ಕು ಪಡೆದ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 107.5 ಕೋಟಿ ರೂಪಾಯಿ ನೀಡಬೇಕು. ಸೋನಿ ಸಂಸ್ಥೆ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರ ಮಾಡಲು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿ ಬಿಸಿಸಿಐಗೆ ನೀಡಬೇಕು. ಇನ್ನು ಡಿಜಿಟಲ್ ಹಕ್ಕು ಖರೀದಿಸಿದ ರಿಲಯನ್ಸ್ ಜಿಯೋ ಪ್ರತಿ ಪಂದ್ಯಕ್ಕೆ 48 ಕೋಟಿ ರೂಪಾಯಿ ನೀಡಬೇಕು.
2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರು. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ (ಒಟ್ಟು 370 ಪಂದ್ಯಗಳು) ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿತ್ತು.
ಸದ್ಯ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ ಇದೆ. ಪ್ರತಿ ಎನ್ಎಫ್ಎಲ್ ಪಂದ್ಯದ ಮೌಲ್ಯ 134 ಕೋಟಿ ರೂಪಾಯಿ ಇದೆ. ಇದೀಗ ಐಪಿಎಲ್ ಎರಡನೇ ಅತೀ ದುಬಾರಿ ಮಾಧ್ಯಮ ಹಕ್ಕು ಹೊಂದಿರುವ ಟೂರ್ನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.