IPL ಟೂರ್ನಿ ಮುಗಿದರೂ ಕುತೂಹಲ ಮಾತ್ರ ಅಂತ್ಯ ಕಂಡಿಲ್ಲ. ಅದಕ್ಕೆ ಕಾರಣ ಐಪಿಎಲ್ ಮೀಡಿಯಾ ರೈಟ್ಸ್ ಬಿಡ್ಡಿಂಗ್. ಐಪಿಎಲ್ ಮಾಧ್ಯಮ ಹಕ್ಕಿಗೆ ಸಿಕ್ಕಾಪಟ್ಟೆ ಫೈಟ್ ಆರಂಭವಾಗಿದೆ. ಭಾನುವಾರ ಇ ಬಿಡ್ಡಿಂಗ್ ಆರಮಭವಾಗಲಿದ್ದು, ಬಿಸಿಸಿಐ ಕ್ಲೋಸಿಂಗ್ ಡೇಟ್ ಅನ್ನು ಇನ್ನೂ ಅಂತಿಮ ಮಾಡಿಲ್ಲ. ಆದರೆ ಬಿಡ್ಡಿಂಗ್ ತೀವ್ರತೆಯ ಆಧಾರದಲ್ಲಿ ಬಿಸಿಸಿಐ ಬಿಡ್ ಕ್ಲೋಸ್ ಮಾಡಲಿದೆ.
2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯುವ ರೇಸ್ನಿಂದ ಜೆಫ್ ಬೆಜೂಸ್ ಮಾಲಿಕತ್ವದ ಅಮೆಜಾನ್ ಸಂಸ್ಥೆ ಹೊರಗುಳಿದಿದೆ. ಆದರೆ ಬಿಸಿಸಿಐಗೆ ಸಾಕಷ್ಟು ಬಿಡ್ ದಾರರು ಸಿಕ್ಕಿದ್ದಾರೆ. ಲೆಕ್ಕಾಚಾರದ ಪ್ರಕಾರ ಸುಮಾರು 50 ರಿಂದ 70 ಸಾವಿರ ಕೋಟಿ ಹಣವನ್ನು ಬಿಸಿಸಿಐ ನಿರೀಕ್ಷೆ ಮಾಡುತ್ತಿದೆ.
ಒಟ್ಟು 10 ಕಂಪನಿಗಳು ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ರೇಸ್ನಲ್ಲಿ ಉಳಿದುಕೊಂಡಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಮೊದಲು 2018ರಲ್ಲಿ ಸ್ಟಾರ್ ಇಂಡಿಯಾ 16,347.5 ಕೋಟಿ ರು.ಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್ನೊಂದಿಗೆ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ. ಇನ್ನು 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿದ್ದು, ಇದರ ಪ್ರಕಾರ ಪ್ರತಿ ಪಂದ್ಯದ ಟೀವಿ ಹಕ್ಕು 49 ಕೋಟಿ ರುಪಾಯಿ, ಮತ್ತು ಪ್ರತಿ ಪಂದ್ಯದ ಡಿಜಿಟೆಲ್ ಹಕ್ಕು 33 ಕೋಟಿ ರುಪಾಯಿ ಇದೆ. ಟೀವಿ ಹಕ್ಕು ಮೂಲಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದ್ದು, ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115ರಿಂದ 120 ಕೋಟಿ ರು. ಆಗಬಹುದು ಎನ್ನಲಾಗುತ್ತಿದೆ.