ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗೆ ಫ್ರಾಂಚೈಸಿಗಳು ಲೆಕ್ಕಾಚಾರ ಆರಂಭಿಸಿವೆ. ಹಳೆಯ 8 ಫ್ರಾಂಚೈಸಿಗಳು ತಮಗೆ ಬೇಕಾಗಿರುವ ಆಟಗಾರರನ್ನು ಉಳಿಸಿಕೊಂಡಿವೆ. ಹೊಸ ಎರಡು ಫ್ರಾಂಚೈಸಿಗಳು ಆಕ್ಷನ್ ಪೂಲ್ನಲ್ಲಿರುವ ಆಟಗಾರರನ್ನು ಆರಿಸಿಕೊಳ್ಳುವ ತಯಾರಿ ಮಾಡುತ್ತಿವೆ. ಈ ಮಧ್ಯೆ ಐಪಿಎಲ್ನಲ್ಲಿ ಫ್ರಾಂಚೈಸಿಗಳು ಕ್ಯಾಪ್ಟನ್ಗಳಿಗಾಗಿ ಹುಡುಕಾಟ ಆರಂಭಿಸಿವೆ.
ಅಂದಹಾಗೇ, ಐಪಿಎಲ್ನ 10 ಫ್ರಾಂಚೈಸಿಗಳ ಪೈಕಿ ಕ್ಯಾಪ್ಟನ್ಗಳು ಸಿಕ್ಕಿರುವುದು ಕೇವಲ 5 ಫ್ರಾಂಚೈಸಿಗಳಿಗೆ ಮಾತ್ರ. ಆದರೆ ಉಳಿದ 5 ಫ್ರಾಂಚೈಸಿಗಳು ನಾಯಕನ ಹುಡುಕಾಟದಲ್ಲಿವೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದರೆ, ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಲೀಡ್ ಮಾಡಲಿದ್ದಾರೆ. ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವವಹಿಸಿಕೊಂಡರೆ, ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ಹೈದ್ರಾಬಾದ್ ನಾಯಕನಾಗಿದ್ದಾರೆ. ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ಐಪಿಎಲ್ನ ಮಾಜಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ನಾಯಕರ ಹುಡುಕಾಟದಲ್ಲಿದೆ. ಲಖ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಹೊಸದಾಗಿ ಐಪಿಎಲ್ ಸೇರಿಕೊಂಡಿರುವುದರಿಂದ ಈ ತಂಡಗಳಿಗೂ ನಾಯಕರ ಅವಶ್ಯಕತೆ ಇದೆ. ಈ ಮಧ್ಯೆ ಹಲವು ಆಟಗಾರರು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಕೆ.ಎಲ್ ರಾಹುಲ್ ಯಾವುದಾದರು ಎರಡು ತಂಡಗಳ ನಾಯಕತ್ವವಹಿಸಿಕೊಳ್ಳಬಹುದು. ಆದರೆ ಉಳಿದ 3 ತಂಡಗಳ ನಾಯಕರು ಯಾರು ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ನಾಯಕತ್ವದ ಅನುಭವ ಹೊಂದಿರುವ ರವಿಚಂದ್ರನ್ ಅಶ್ವಿನ್ ಮತ್ತು ಇಯಾನ್ ಮೊರ್ಗಾನ್ ಕಡೆಗೂ ಹಲವು ತಂಡಗಳು ಕಣ್ಣಿಟ್ಟಿವೆ. ಇನ್ನು ಹಾರ್ದಿಕ್ ಪಾಂಡ್ಯಾ, ಇಶನ್ ಕಿಶನ್, ಕ್ವಿಂಟನ್ ಡಿ ಕಾಕ್ ಸೇರಿದಂತೆ ಹಲವು ಯಾವುದಾದರು ಒಂದು ಫ್ರಾಂಚೈಸಿಯಲ್ಲಿ ನಾಯಕರಾಗಿ ಕಂಡರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಐಪಿಎಲ್ನಲ್ಲಿ ಈಗ ನಾಯಕರು ಬೇಕಾಗಿದ್ದಾರೆ ಅನ್ನುವ ಟ್ರೆಂಡ್ ನಡೆಯುತ್ತಿದೆ.