ಆ್ಯಶಷ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾ ನಡುವಿನ ಅಲ್ಟಿಮೇಟ್ ಟೆಸ್ಟ್ ಫೈಟ್ ಇದಾಗಿರಲಿದೆ. 5ಪಂದ್ಯಗಳ ಸರಣಿಯ ಮೊದಲ ಪಂದ್ಯ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಆ್ಯಶಸ್ ಹೋರಾಟ ವಿಶ್ವದ ಗಮನ ಸೆಳೆಯುತ್ತಿದೆ.
ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತವರಿನಲ್ಲಿ ಗೆಲ್ಲುವ ಯೋಚನೆ ಮಾಡುತ್ತಿದೆ. ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಸ್ವೀವನ್ ಸ್ಮಿತ್, ಮಾರ್ನಸ್ ಲಬುಶಂಗೆಯಂತಹ ಟೆಸ್ಟ್ ಸ್ಪೆಷಲಿಸ್ಟ್ಗಳೇ ತಂಡದ ಬ್ಯಾಟಿಂಗ್ ಆಧಾರ. ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿದ್ದರೆ, ಕ್ಯಮರೂನ್ ಗ್ರೀನ್ ಆಲ್ರೌಂಡರ್. ನಾಯಕನಾಗಿ ಪ್ಯಾಟ್ ಕಮಿನ್ಸ್ ಪಾಲಿಗೆ ಇದು ಮೊದಲ ಮ್ಯಾಚ್. ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯೋನ್ ಮೊದಲ ಟೆಸ್ಟ್ ಆಡುವುದು ಖಚಿತವಾಗಿದೆ.
ಇಂಗ್ಲೆಂಡ್ ಕೂಡ ಸಾಧಾರಣಾ ತಂಡವಲ್ಲ. ಜಾಕ್ ಕ್ರೌಲಿ, ರೋರಿ ಬರ್ನ್ಸ್, ಕ್ಯಾಪ್ಟನ್ ಜೋ ರೂಟ್, ಜಾನಿ ಬೇರ್ ಸ್ಟೋವ್, ಜೋಸ್ ಬಟ್ಲರ್ರಂತಹ ಬ್ಯಾಟರ್ಗಳನ್ನು ಹೊಂದಿದೆ. ಒಲಿ ಪೋಪ್, ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ವಾಪಾಸಾಗಿರುವುದು ಬ್ಯಾಲೆನ್ಸ್ ಸರಿ ಮಾಡಿದೆ. ಕ್ರೆಗ್ ಓವರ್ಟನ್, ಒಲಿ ರಾಬಿನ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ವೇಗದ ಬೌಲಿಂಗ್ ವಿಭಾಗವನ್ನು ನೋಡಿಕೊಂಡರೆ ಜಾಕ್ ಲೀಚ್ ಸ್ಪಿನ್ನರ್ ಆಗಿದ್ದಾರೆ.
ಬ್ರಿಸ್ಬೇನ್ನ ಗಬ್ಬಾ ಮೈದಾನ ವೇಗದ ಬೌಲರ್ಗಳಿಗೆ ನೆರವು ನೀಡುವ ಪಿಚ್. ವೇಗ ಮತ್ತು ಬೌನ್ಸ್ ಇರುವುದರಿಂದ ಎರಡು ತಂಡಗಳು ಅದನ್ನು ಲಾಭ ಮಾಡಿಕೊಳ್ಳಲು ನೋಡುತ್ತಿವೆ. ಒಟ್ಟಿನಲ್ಲಿ ಆ್ಯಶಸ್ ಆರಂಭದ ಮೂಲಕ ಹಳೆ ವೈರಿಗಳು ಮತ್ತೆ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.