ಐಪಿಎಲ್ 16ನೇ ಆವೃತ್ತಿಗೆ ಸಿದ್ಧತೆ ನಡೆದಿದೆ. ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಫ್ರಾಂಚೈಸಿಗಳು ನ.15ರೊಳಗೆ ರೀಟೈನ್ ಮಾಡಿಕೊಂಡ ಆಟಗಾರರು ಹಾಗೂ ತಂಡದಿಂದ ಬಿಡುಗಡೆ ಮಾಡಿದವರ ಹೆಸರನ್ನು ಸಲ್ಲಿಸಲು ಗಡುವು ನೀಡಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಕ್ರಿಯೆಯನ್ನು ಆರಂಭಿಸಿವೆ.
ಮುಂದಿನ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್, ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಮುಂಬೈ ಇಂಡಿಯನ್ಸ್‌ಗೆ ಟ್ರೇಡ್ ಮಾಡಲಾಗಿದೆ. 2022ರ ಹರಾಜಿನಲ್ಲಿ ಬೆಹ್ರೆನ್‌ಡಾರ್ಫ್ ಮೂಲ ಬೆಲೆ INR 75 ಲಕ್ಷಕ್ಕೆ RCB ಸೇರಿಕೊಂಡಿದ್ದರು. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿರುವ ಅವರು, 5 ವಿಕೆಟ್ ಕಬಳಿಸಿದ್ದಾರೆ. 2018ರಲ್ಲಿ ಮುಂಬೈ ಪರ ಆಡಿದ್ದರು.
ಮುಂಬೈ ಇಂಡಿಯನ್ಸ್ ಪರ ದೀರ್ಘಕಾಲ ಸೇವೆ ಸಲ್ಲಿಸಿರುವ ಕೀರಾನ್ ಪೊಲಾರ್ಡ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ವೆಸ್ಟ್ ಇಂಡೀಸ್ ಅನುಭವಿ ಆಲ್‌ರೌಂಡರ್ 2010ರಿಂದ ಮುಂಬೈಗಾಗಿ ಆಡುತ್ತಿದ್ದರು. ವರದಿಯ ಪ್ರಕಾರ MI, ಫ್ಯಾಬ್ ಅಲೆನ್ ಮತ್ತು ಟೈಮಲ್ ಮಿಲಿಸ್ ಅವರನ್ನೂ ಬಿಡುಗಡೆ ಮಾಡಲು ನಿರ್ಧರಿಸಿದೆ.
ಏತನ್ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಂಡಿದೆ. ಕಳೆದ ಕೆಲವು ತಿಂಗಳಿನಿಂದ ಜಡೇಜಾ ಹಾಗೂ CSK ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಜಡ್ಡು ಉಳಿಸಿಕೊಳ್ಳುವಲ್ಲಿ ಚೆನ್ನೈ ಮಾಲೀಕರು ಯಶಸ್ವಿಯಾಗಿದ್ದಾರೆ. ಹಾಗೆಯೇ, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.