ಸತತ ಎರಡು ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೆಂಚ್ ಕಾಯುತ್ತಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, 15ನೇ ಆವೃತ್ತಿಯ ಐಪಿಎಲ್ನಲ್ಲಿ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
2022ರ ಐಪಿಎಲ್ನ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ಪ್ರತಿ ಪಂದ್ಯಕ್ಕೂ ತಂಡದಲ್ಲಿ ಬದಲಾವಣೆ ಮಾಡಿಕೊಂಡು ಬಂದಿದೆ. ಅದರಂತೆ ಈವರೆಗೂ ಒಟ್ಟು ಆಡಿರುವ 13 ಪಂದ್ಯದಲ್ಲಿ 22 ಆಟಗಾರರು ಕಣಕ್ಕಿಳಿದಿದ್ದಾರೆ. ಹೀಗಾಗಿ ಕೊನೆಯ ಲೀಗ್ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಮುಂಬೈ ಆಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಬದಲಾವಣೆಯಲ್ಲಿ ಅರ್ಜುನ್ ತೆಂಡುಲ್ಕರ್ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರಶ್ನೆ ಮೂಡಿದೆ.
![IPL 2022: ಡೆಲ್ಲಿ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿರುವ ಮುಂಬೈ: ಅರ್ಜುನ್ ತೆಂಡುಲ್ಕರ್ಗೆ ಸಿಗಲಿದ್ಯಾ ಚಾನ್ಸ್? 3 ARJUN TENDULKAR](http://sportskarnataka.com/wp-content/uploads/2022/05/ARJUN-TENDULKAR.jpg)
2021ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿರುವ ಅರ್ಜುನ್ ತೆಂಡುಲ್ಕರ್, ಈವರೆಗೂ 27 ಪಂದ್ಯಗಳಿಂದ ಬೆಂಚ್ ಕಾದಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಮುಂಬೈ ಇಂಡಿಯನ್ಸ್ ತಂಡದ ಟ್ವಿಟರ್ ಖಾತೆಯಲ್ಲಿ ಅರ್ಜುನ್ ತೆಂಡುಲ್ಕರ್ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದನ್ನ ಶೇರ್ ಮಾಡಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಅಲ್ಲದೇ, ರೋಹಿತ್ ಶರ್ಮ ಸಹ ಕೊನೆಯ ಪಂದ್ಯದಲ್ಲಿ ಹೊಸ ಮುಖಗಳನ್ನ ನೋಡುವ ಬಗ್ಗೆ ಸುಳಿವು ನೀಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಉಪಾಂತ್ಯ ತಲುಪಿದ್ದು, ಹಲವು ತಂಡಗಳು ಲೀಗ್ ಹಂತದ ಪಂದ್ಯಗಳನ್ನ ಪೂರ್ಣಗೊಳಿಸಿದೆ. ಸೀಸನ್ನಲ್ಲಿ ನೀರಸ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್, ಮೇ 22ರಂದು ತನ್ನ ಕೊನೆ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯವಾದರೆ, ಡೆಲ್ಲಿ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೇ ಡೆಲ್ಲಿತಂಡ ಪ್ಲೇ-ಆಫ್ ಹಂತಕ್ಕೇರಲಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಪಂದ್ಯ ಡೆಲ್ಲಿ ಪಾಲಿಗೆ ಕ್ವಾರ್ಟರ್ ಫೈನಲ್ ಪಂದ್ಯವಾಗಿದೆ.