IPL 2022- RCB Vs LSG – ಆರ್ ಸಿಬಿ ಕನಸನ್ನು ಭಗ್ನಗೊಳಿಸುತ್ತಾರಾ ಕನ್ನಡಿಗ ಕೆ.ಎಲ್. ರಾಹುಲ್..!

ಐದಾರು ವರ್ಷಗಳ ಹಿಂದೆ.. ಕೆ.ಎಲ್. ರಾಹುಲ್ ಆರ್ ಸಿಬಿಯ ಗೆಲುವಿಗಾಗಿ ಹೋರಾಟ ನಡೆಸಿದ್ದರು. ಆನಂತರ ಪಂಜಾಬ್, ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ಕೆ.ಎಲ್. ಚೊಚ್ಚಲ ಪ್ತಯತ್ನದಲ್ಲೇ ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಚಿತ್ತವನ್ನಿಟ್ಟಿದ್ದಾರೆ.
ಆದ್ರೆ ಅದಕ್ಕಿಂತ ಮುನ್ನ ಕೆ.ಎಲ್. ರಾಹುಲ್ ಬಳಗ ಆರ್ ಸಿಬಿಯ ಸವಾಲನ್ನು ಗೆಲ್ಲಬೇಕಿದೆ. ಈಗಾಗಲೇ ಅದೃಷ್ಟದ ಬೆಂಬಲವನ್ನು ಪಡೆದುಕೊಂಡಿರುವ ಆರ್ ಸಿಬಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ಎಂಟ್ರಿಪಡೆದುಕೊಂಡಿದೆ.
ಇದೀಗ ಪ್ಲೇ ಆಫ್ ನ ಎರಡನೇ ಪಂದ್ಯದಲ್ಲಿ ಅಂದ್ರೆ ಮೇ 25ರಂದು ನಡೆಯಲಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೋರಾಟ ನಡೆಸಲಿವೆ.
ಈ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲೇಬೇಕು ಎಂದು ಆರ್ ಸಿಬಿ ಅಭಿಮಾನಿಗಳು ಈಗಾಗಲೇ ಜೋಶ್ ನಲ್ಲೇ ಹೇಳುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲ್ಲಬೇಕು ಎಂದು ಹೇಳುತ್ತಿದ್ರೆ ಅಚ್ಚರಿ ಏನಿಲ್ಲ.
ಇನ್ನೊಂದೆಡೆ ಈ ಪಂದ್ಯದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲ ಕೂಡ ಕರ್ನಾಟಕದ ಅಭಿಮಾನಿಗಳಲ್ಲಿ ಇದೆ. ಒಂದು ಕಡೆ ಆರ್ ಸಿಬಿ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಫ್ರಾಂಚೈಸಿಯಾದ್ರೆ, ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯ ವಹಿಸಿರುವುದು ಕರ್ನಾಟಕದ ಹುಡುಗ ಕೆ.ಎಲ್. ರಾಹುಲ್. ಹೀಗಾಗಿ ಯಾರಿಗೆ ಜೈಕಾರ ಹಾಕಬೇಕು ಎಂಬುದೇ ಗೊಂದಲಕ್ಕೆ ಕಾರಣವಾಗಿದೆ.
ಹಾಗೇ ನೋಡಿದ್ರೆ ಆರ್ ಸಿಬಿಯನ್ನು ಬೆಂಬಲಿಸಲು ಕಾರಣ ಒಂದೇ. ಅದು ಬೆಂಗಳೂರು. ಇನ್ನುಳಿದಂತೆ ತಂಡದಲ್ಲಿರುವ ಕನ್ನಡಿಗರ ಸಂಖ್ಯೆ ಕೇವಲ ಎರಡು ಮಾತ್ರ.

ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಹಾಗಿಲ್ಲ. ಎಲ್ ಎಸ್ ಜಿ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಕೆ.ಎಲ್. ರಾಹುಲ್ ನಾಯಕನಾದ್ರೆ, ಕೃಷ್ಣಪ್ಪ ಗೌತಮ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ದೂರದ ಲಕ್ನೋ ತಂಡವಾಗಿದ್ರೂ ಕೆ.ಎಲ್. ರಾಹುಲ್, ಕೆ. ಗೌತಮ್ ಅವರಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಆದ್ರೆ ಆರ್ ಸಿಬಿ ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶವನ್ನೇ ನೀಡಿಲ್ಲ. ಹೀಗಾಗಿ ಯಾವ ಕಾರಣಕ್ಕಾಗಿ ಕನ್ನಡಿಗರು ಆರ್ ಸಿಬಿ ತಂಡವನ್ನು ಬೆಂಬಲಿಸಬೇಕು ಎಂಬುದಕ್ಕೆ ಆರ್ ಸಿಬಿ ಅಭಿಮಾನಿಗಳೇ ಉತ್ತರಿಸಬೇಕು.
ನಿಜ, ಐಪಿಎಲ್ ಅಂದ್ರೆ ಭಾಷೆ, ಧರ್ಮ, ರಾಜ್ಯದ ಗೆರೆಗಳಿಲ್ಲ. ಇಲ್ಲಿ ಯಾವ ತಂಡದ ಪರ ಆಡಿದ್ರೂ ಆಡೋದು ಕ್ರಿಕೆಟ್ಟೇ. ಆರ್ ಸಿಬಿ ತಂಡದಲ್ಲಿ ಕನ್ನಡಿಗ ಆಟಗಾರರು ಇಲ್ಲದಿದ್ರೂ ಅದನ್ನು ಬೆಂಬಲಿಸುವ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದ್ರೆ ಆರ್ ಸಿಬಿ ಇಷ್ಟೊಂದು ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಲು ಕಾರಣ ಸ್ಥಳೀಯ ಅಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿನಯ್ ಕುಮಾರ್, ಮನಿಷ್ ಪಾಂಡೆ ಮೊದಲಾದ ಆಟಗಾರರ ಕೊಡುಗೆಯೂ ಇದೆ. ಕೇವಲ ವಿರಾಟ್, ಎಬಿಡಿ, ಕ್ರಿಸ್ ಗೇಲ್ ನಂತಹ ಆಟಗಾರರಿಂದಲೇ ಆರ್ ಸಿಬಿ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವನ್ನು ಹೊಂದಿದೆ ಎಂದು ಹೇಳುವುದು ಕೂಡ ಸರಿಯಲ್ಲ.

ಇನ್ನು ಪಂಜಾಬ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ನೀಡಿದಾಗ ತಂಡದ ಹೆಡ್ ಕೋಚ್ ಮತ್ತು ನಾಯಕನ ಮೇಲೆ ಟೀಕೆ ಮಾಡಿರುವುದನ್ನು ಮರೆಯುವಂತಿಲ್ಲ. ಆದ್ರೆ ನಮ್ಮ ಆರ್ ಸಿಬಿ ತಂಡ ಹೀನಾಯವಾಗಿ ಸೋತ್ರೂ ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಅದು ಆರ್ ಸಿಬಿ ಅಭಿಮಾನಿಗಳ ದೊಡ್ಡತನ. ಅಷ್ಟೇ ಅಲ್ಲ, ಸೋತ್ರೂ ಗೆದ್ರೂ ಆರ್ ಸಿಬಿ ಮೇಲಿನ ಅಭಿಮಾನ ಆರ್ ಸಿಬಿ ಅಭಿಮಾನಿಗಳಿಗೆ ಒಂಚೂರು ಕಮ್ಮಿಯಾಗುವುದಿಲ್ಲ. ಇದು ಆರ್ ಸಿಬಿ ಅಭಿಮಾನಿಗಳ ಸ್ಪೆಷಾಲಿಟಿ.
ಹಾಗಂತ ಎಲ್ಲರೂ ಕೂಡ ಆರ್ ಸಿಬಿ ಅಭಿಮಾನಿಗಳೇ ಆಗಬೇಕು.. ಆರ್ ಸಿಬಿ ತಂಡವನ್ನು ಟೀಕೆ ಮಾಡಬಾರದು ಎಂದು ಹೇಳುವುದು ತಪ್ಪೇ.. ಕ್ರಿಕೆಟ್ ಅಭಿಮಾನಿ, ಯಾವ ತಂಡವನ್ನು ಬೇಕಾದ್ರೂ ಬೆಂಬಲಿಸ¨ಹುದು.. ಯಾವ ತಂಡವನ್ನು ಬೇಕಾದ್ರೂ ಇಷ್ಟಪಡಬಹುದು. ಅದನ್ನು ಕೂಡ ಯಾರು ಪ್ರಶ್ನೆ ಮಾಡುವಂಗಿಲ್ಲ.
ಒಟ್ಟಿನಲ್ಲಿ ಎರಡನೇ ಫ್ಲೇ ಆಫ್ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಬೆಂಬಲಿಸಬೇಕೋ ಅಥವಾ ರಾಹುಲ್ ಬಳಗವನ್ನು ಬೆಂಬಲಿಸಬೇಕೋ ಎಂಬ ಗೊಂದಲ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಅಷ್ಟೇ ಅಲ್ಲ ಕಪ್ ನಮ್ದೆ ಅನ್ನುತ್ತಿರುವ ಆರ್ ಸಿಬಿ ಮತ್ತು ಆರ್ ಸಿಬಿ ಅಭಿಮಾನಿಗಳ ಕನಸು ಕನಸಾಗುತ್ತಾ ಅಥವಾ ಕನಸು ಭಗ್ನಗೊಳ್ಳುತ್ತಾ ಎಲ್ಲವೂ ಕೂಡ ಕನ್ನಡಿಗ ಕೆ.ಎಲ್. ರಾಹುಲ್ ಕೈಯಲ್ಲಿದೆ.