IPL 2022- RCB-Rajat Patidar ಎಲ್ಲವೂ ಹನುಮನ ಕೃಪೆ.. ರಜತ್ ಪಾಟಿದಾರ್…ಆರ್ ಸಿಬಿ ಲಾರ್ಡ್ ಹನುಮಾನ್..

ಆ ಒಂದು ಶತಕ… ರಜತ್ ಪಾಟಿದಾರ್ ಅವರ ಕ್ರಿಕೆಟ್ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶತಕ ದಾಖಲಿಸುವ ಮುನ್ನ ರಜತ್ ಪಾಟಿದಾರ್ ಸಾಮಾನ್ಯ ರಣಜಿ ಕ್ರಿಕೆಟಿಗ. ಆದ್ರೆ ಒತ್ತಡದಲ್ಲಿ ಶತಕ ದಾಖಲಿಸಿದ್ದ ಪರಿಯನ್ನು ನೋಡಿದ ನಂತರ ರಜತ್ ಒಬ್ಬ ಅದ್ಭುತ ಪ್ರತಿಭಾವಂತ ಕ್ರಿಕೆಟಿಗ ಎಂಬುದು ಕ್ರಿಕೆಟ್ ಜಗತ್ತಿಗೆ ಗೊತ್ತಾಗಿದೆ.
ಹಾಗೇ ನೋಡಿದ್ರೆ, ರಜತ್ ಒತ್ತಡದ ಸಂದರ್ಭದಲ್ಲಿ ಆಡುವುದು ಇದೇನೂ ಹೊಸತಲ್ಲ. ರಣಜಿ ಮತ್ತು ಕ್ಲಬ್ ಕ್ರಿಕೆಟ್ ನಲ್ಲಿ ಇಂತಹ ಅನೇಕ ಇನಿಂಗ್ಸ್ ಗಳನ್ನು ಆಡಿದ್ದಾರೆ. ಆದ್ರೆ ಅದು ಯಾವುದು ಕೂಡ ಹೊರ ಜಗತ್ತಿಗೆ ಗೊತ್ತಾಗಿರಲಿಲ್ಲ.
ಅಂದ ಹಾಗೇ ರಜತ್ ಪಾಟಿದಾರ್ ಅವರ ಒಡನಾಡಿಗಳು ರಜತ್ ಅವರ ಆಟದ ವೈಖರಿಗೆ ಅಚ್ಚರಿ ಏನು ವ್ಯಕ್ತಪಡಿಸಿಲ್ಲ. ಯಾಕಂದ್ರೆ ರಜತ್ ಅವರ ಪ್ರತಿಭೆ ಮತ್ತು ಸಾಮಥ್ರ್ಯ ಏನು ಎಂಬುದು ಅವರಿಗೆ ಮೊದಲೇ ತಿಳಿದಿತ್ತು.
ರಜತ್ ಅವರ ಒಡನಾಡಿಗಳು ರಜತ್ ಅವರನ್ನು ಕರೆಯುವುದು ಲಾರ್ಡ್ ಹನುಮಾನ್ ಅಂತ. ಹನುಮಾನ್ ಸಮಸ್ಯೆಗಳನ್ನು ಬಗೆಹರಿಸುವ ದೇವರು ಎಂಬ ನಂಬಿಕೆ ಇದೆ. ಅದೇ ರೀತಿ ತಂಡ ಸಂಕಷ್ಟದಲ್ಲಿದ್ದಾಗ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದ ರಜತ್ ಪಾಟಿದಾರ್ ಅವರನ್ನು ಕೂಡ ಅವರ ಸ್ನೇಹಿತರು ಲಾರ್ಡ್ ಹನುಮಾನ್ ಅಂತನೇ ಕರೆಯುತ್ತಿದ್ದರು.

ಇದೀಗ ರಜತ್ ಪಾಟಿದಾರ್ ಆರ್ ಸಿಬಿ ತಂಡದ ಲಾರ್ಡ್ ಹನುಮಾನ್ ಆಗಿದ್ದಾರೆ. ಮಹತ್ವದ ಪಂದ್ಯ, ಗೆಲ್ಲಲೇಬೇಕಾದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರು ಆರ್ ಸಿಬಿ ತಂಡಕ್ಕೆ ಆಧಾರವಾಗಿದ್ದಾರೆ. ಅಷ್ಟೇ ಅಲ್ಲ, ಆರ್ ಸಿಬಿಯ ಕಪ್ ಗೆಲ್ಲುವ ನಿರೀಕ್ಷೆಗಳನ್ನು ಹೆಚ್ಚಿಸಿದ್ದಾರೆ.
ಹಾಗೇ ನೋಡಿದ್ರೆ ರಜತ್ ಪಾಟಿದಾರ್ ಅವರಿಗೆ 2022ರ ಐಪಿಎಲ್ ಮೆಗಾ ಹರಾಜು ನಿರಾಸೆಯನ್ನುಂಟು ಮಾಡಿತ್ತು. ಬಿಡ್ಡಿಂಗ್ ನಲ್ಲಿ ರಜತ್ ಪಾಟಿದಾರ್ ಅವರನ್ನು ಯಾವುದೇ ಫ್ರಾಂಚೈಸಿ ಕೂಡ ಖರೀದಿ ಮಾಡಿರಲಿಲ್ಲ. ಈ ನಡುವೆ 28ರ ಹರೆಯದ ರಜತ್ ಗೆ ಮದುವೆ ಮಾಡಿಸುವ ಲೆಕ್ಕಚಾರವನ್ನು ಅವರ ಹೆತ್ತವರು ಹಾಕಿಕೊಂಡಿದ್ದರು. ಅಲ್ಲದೆ ಮೇ 9ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದರು. ಮದುವೆಗಾಗಿ ಹೊಟೇಲ್ ಕೂಡ ಬುಕ್ ಮಾಡಿದ್ದರು.

ಏತನ್ಮಧ್ಯೆ, ರಜತ್ ಪಾಟಿದಾರ್ ಅವರ ಬದುಕಿಗೆ ಮತ್ತೊಂದು ತಿರುವು ಸಿಕ್ಕಿತ್ತು. ಆರ್ ಸಿಬಿಯ ಲಿನ್ವಿತ್ ಸಿಸೊಡಿಯಾ ಗಾಯದಿಂದ ಹೊರಬಿದ್ದಿದ್ದರು. ಆಗ ರಜತ್ ಗೆ ಆರ್ ಸಿಬಿಯಿಂದ ಕರೆ ಬಂದಿತ್ತು. ಆಗ ಮದುವೆಯನ್ನು ಮುಂದೂಡಿ ಐಪಿಎಲ್ ಗೆ ಅಖಾಡಾಕ್ಕೆ ಧುಮುಕಿದ್ರು. ಆರಂಭದಲ್ಲಿ ಅವಕಾಶ ಸಿಗಲಿಲ್ಲ. ಆದ್ರೆ ಸಿಕ್ಕ ಅವಕಾಶವನ್ನು ಮಾತ್ರ ಸರಿಯಾಗಿಯೇ ಬಳಸಿಕೊಂಡ್ರು. ಹೀಗೆ ಅನ್ ಸೋಲ್ಡ್ ಆಟಗಾರ ಈಗ ಆರ್ ಸಿಬಿಯ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್ ಕೂಡ ಆನ್ ಸೋಲ್ಡ್ ಆದಾಗ ಅವರ ಕ್ರಿಕೆಟ್ ಬದುಕಿ ಅವಕಾಶ ನೀಡಿದ್ದು ಇದೇ ಆರ್ ಸಿಬಿ. ಬಳಿಕ ಕ್ರಿಸ್ ಗೇಲ್ ಆರ್ ಸಿಬಿಯ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ರು. ಇದೀಗ ರಜತ್ ಪಾಟಿದಾರ್ ಕೂಡ ಆರ್ ಸಿಬಿಯ ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.