IPL 2022- RCB – ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನು ಆರ್ ಸಿಬಿ ಸಂಭ್ರಮಿಸಿದ್ದು ಸರಿನಾ ?

ಆಟದಲ್ಲಿ ಸೋಲು -ಗೆಲುವು ನಾಣ್ಯದ ಎರಡು ಮುಖಗಳಿದ್ದಂತೆ. ಅಲ್ಲಿ ನಿರಾಸೆಯ ಕಣ್ಣೀರು ಇರುತ್ತೆ.. ಸಂಭ್ರಮದ ಕಣ್ಣೀರು ಇರುತ್ತೆ. ಇವೆರಡನ್ನು ಸಮನಾವಾಗಿ ಸ್ವೀಕರಿಸುವುದೇ ಕ್ರೀಡಾ ಸ್ಫೂರ್ತಿ.
ಹೌದು, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಕೊನೆಯ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಆದ್ರೆ ಅದಕ್ಕಿಂತ ಮುನ್ನ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಹೋರಾಟ ನಿರ್ಣಾಯಕವಾಗಿತ್ತು. ಯಾಕಂದ್ರೆ ಆ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತಿದ್ರೆ ಪ್ಲೇ ಆಫ್ ಗೆ ಪ್ರವೇಶಿಸಿತ್ತು. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನಸನ್ನು ಮುಂಬೈ ಇಂಡಿಯನ್ಸ್ ಭಗ್ನಗೊಳಿಸಿತ್ತು.
ಸತತ ಸೋಲು ಮತ್ತು ಅವಮಾನಕ್ಕೆ ತುತ್ತಾಗಿದ್ರೂ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಗೆಲುವನ್ನು ಅಷ್ಟೊಂದು ಸಂಭ್ರಮಿಸಲಿಲ್ಲ. ಮಾಮೂಲಿ ಪಂದ್ಯದಂತೆ ರೋಹಿತ್ ಬಳಗ ಗೆಲುವನ್ನು ಸ್ವೀಕರಿಸಿತ್ತು.

ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಸೋಲು ಆಘಾತವನ್ನುಂಟು ಮಾಡಿತ್ತು. ಸೋಲು ಗೆಲುವಿನೊಂದಿಗೆ ಸಾಗಿ ಬಂದಿದ್ದ ರಿಷಬ್ ಪಂತ್ ಬಳಗ ಮಹತ್ವದ ಪಂದ್ಯದಲ್ಲಿ ಎಡವಿ ಬಿತ್ತು. ತಾವೇ ಮಾಡಿರುವ ಪ್ರಮಾದಗಳಿಂದ ಸೋಲು ಅನುಭವಿಸಿ ಲೀಗ್ ಹಂತಕ್ಕೆ ಸೀಮಿತವಾಗಬೇಕಾಯ್ತು.
ಆದ್ರೆ ಈ ಪಂದ್ಯವನ್ನು ಉಸಿರು ಬಿಗಿ ಹಿಡಿದು ಕೊಂಡು ನೋಡುತ್ತಿದ್ದವರು ಆರ್ ಸಿಬಿ ಆಟಗಾರರು. ಯಾಕಂದ್ರೆ ಆರ್ ಸಿಬಿ ತಂಡಕ್ಕೆ ಪ್ಲೇ ಆಫ್ ಪ್ರವೇಶ ಪಡೆಯಬೇಕಾದ್ರೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಲೇಬೇಕಿತ್ತು. ಮುಂಬೈ ಇಂಡಿಯನ್ಸ್ ಗೆಲ್ಲಲೇಬೇಕಿತ್ತು. ಹೀಗಾಗಿ ಆರ್ ಸಿಬಿ ಅಭಿಮಾನಿಗಳ ಜೊತೆಗೆ ಆರ್ ಸಿಬಿ ಆಟಗಾರರು ಪ್ರೇಕ್ಷಕರಾಗಿಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲುತ್ತಿದ್ದಂತೆ ಆರ್ ಸಿಬಿ ಅಭಿಮಾನಿಗಳು ಮಾತ್ರವಲ್ಲ.,, ಆರ್ ಸಿಬಿ ಆಟಗಾರರು ಕೂಡ ಕುಣಿದು ಕುಪ್ಪಳಿಸಿದ್ರು. ಪ್ಲೇ ಆಫ್ ಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಂತೆ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸಣ್ಣ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಅಂತನೂ ಹೇಳಿದ್ದಾರೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲಿನ ಮೇಲೆ ಆರ್ ಸಿಬಿ ತಂಡದ ಆಟಗಾರರು ಗೆಲುವಿನ ಗೋಪುರ ಕಟ್ಟಲು ಹೊರಟಿದ್ದಾರೆ. ಈ ಸಲ ಕಪ್ ನಮ್ದೆ ಅನ್ನುತ್ತಿರುವ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಪ್ಲೇ ಆಫ್ ಅಫ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಆಡಲಿದೆ.

ಅದೇನೇ ಇರಲಿ, ಆದ್ರೆ ಆರ್ ಸಿಬಿ ಆಟಗಾರರ ವರ್ತನೆ ಮತ್ತು ಸಂಭ್ರಮ ಹಲವು ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ಇನ್ನೊಂದು ತಂಡದ ಸೋಲನ್ನು ಸಂಭ್ರಮಿಸುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಕೂಡ ಮುಖ್ಯವಾಗಿರುತ್ತೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ಸೋತಿದೆ.. ಆರ್ ಸಿಬಿ ಪ್ಲೇ ಆಫ್ ಪ್ರವೇಶ ಮಾಡಿದೆ. ಇದರಲ್ಲಿ ಕುಣಿದು ಸಂಭ್ರಮಿಸುವ ಅವಶ್ಯಕತೆ ಆರ್ ಸಿಬಿ ತಂಡಕ್ಕೆ ಏನಿತ್ತು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಧನ್ಯವಾದ ಹೇಳುವ ಅಗತ್ಯವಾದ್ರೂ ಏನಿತ್ತು ?
ಈ ರೀತಿ ಆರ್ ಸಿಬಿ ಆಟಗಾರರ ವರ್ತಿಸುವುದರಿಂದ ಯಾವ ರೀತಿಯ ಸಂದೇಶ ರವಾನೆಯಾಗುತ್ತೆ..? ಒಂದು ವೇಳೆ ಗುಜರಾತ್ ಟೈಟಾನ್ಸ್, ರಾಜಸ್ತಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದಂತೆ ಲೀಗ್ ನ ಕೊನೆಯ ಪಂದ್ಯಕ್ಕೆ ಮುನ್ನವೇ ಪ್ಲೇ ಆಫ್ ಗೆ ಆರ್ ಸಿಬಿ ಎಂಟ್ರಿಯಾಗುತ್ತಿದ್ರೆ ಆರ್ ಸಿಬಿ ಆಟಗಾರರ ಸಂಭ್ರಮವನ್ನು ಯಾರು ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ. ಆದ್ರೆ ಇನ್ನೊಂದು ತಂಡದ ಸೋಲನ್ನು ಸಂಭ್ರಮಿಸಿದ ಆರ್ ಸಿಬಿ ಆಟಗಾರರ ವರ್ತನೆ ಸರಿ ಇಲ್ಲ ಅನ್ಸುತ್ತೆ.
ಏನೇ ಆಗ್ಲಿ ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿಯಾಗಿದೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಕರ್ನಾಟಕದ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡು ಪ್ಲೇಸಸ್ ನೇತೃತ್ವದ ಪ್ಲೇ ಆಫ್ ನ ಎರಡನೇ ಪಂದ್ಯ ಮೇ 25ರಂದು ನಡೆಯಲಿದೆ. ಫಲಿತಾಂಶಕ್ಕಾಗಿ ಕಾಯಬೇಕು.. ಯಾರು ಸಂಭ್ರಮಿಸುತ್ತಾರೋ ಅನ್ನೋದನ್ನು ಕಾದು ನೋಡೋಣ…