15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಹಂತ ತಲುಪಿದ್ದು, ಈ ಬಾರಿಯ ಐಪಿಎಲ್ನ ಪ್ಲೇ-ಆಫ್ ಹಂತಕ್ಕೇರುವ ತಂಡಗಳ ಕುರಿತಂತೆ ಭಾರೀ ಕುತೂಹಲ ಮೂಡಿಸಿದೆ. ಟೂರ್ನಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟನ್ಸ್ ಹೊರತುಪಡಿಸಿ ಉಳಿದ ಯಾವುದೇ ತಂಡಗಳು ಈವರೆಗೂ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಉಳಿದ ಮೂರು ಸ್ಥಾನಗಳಿಗೆ ಒಟ್ಟು 7 ತಂಡಗಳ ನಡುವೆ ಪೈಪೋಟಿ ಆರಂಭಗೊಂಡಿದೆ.
ಪ್ರಸಕ್ತ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಗುಳಿದಿವೆ. ಆದರೆ ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳು ಪ್ಲೇ-ಆಫ್ ಹಂತಕ್ಕೇರಲು ಕೊನೆಹಂತದ ಕಸರತ್ತು ನಡೆಸುತ್ತಿವೆ. ಹೀಗಾಗಿ ಉಳಿದ 7 ತಂಡಗಳಲ್ಲಿ ನಾಲ್ಕರ ಘಟ್ಟಕ್ಕೇರುವ ಮೂರು ತಂಡಗಳು ಯಾವುದು ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
7 ತಂಡಗಳ ಪ್ಲೇ-ಆಫ್ ಲೆಕ್ಕಾಚಾರ ಇಂತಿದೆ:
RR & LSG:
ರಾಜಸ್ಥಾನ್ ಹಾಗೂ ಲಕ್ನೋ ತಂಡಗಳು 15ನೇ ಸೀಸನ್ ಐಪಿಎಲ್ನ ಪ್ಲೇ-ಆಫ್ ಹೊಸ್ತಿಲಲ್ಲಿದ್ದರು, ಎರಡು ತಂಡಗಳಿಗೂ ಪ್ಲೇ-ಆಫ್ ಸ್ಥಾನ ಖಚಿತವಾಗಿಲ್ಲ. ಸದ್ಯ 16 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡದ ರನ್ರೇಟ್ ಉತ್ತಮವಾಗಿದೆ. ಹೀಗಾಗಿ ರಾಜಸ್ಥಾನ್ ತಂಡದ ಪ್ಲೇ-ಆಫ್ ಪ್ರವೇಶದ ಅವಕಾಶ ಶೇ.90ರಷ್ಟು ಖಚಿತವಾಗಿದೆ. ಆದರೆ 16 ಅಂಕವಿದ್ದರು ರನ್ರೇಟ್ನಲ್ಲಿ ಕುಸಿತ ಕಂಡಿರುವ ಲಕ್ನೋ ಸೂಪರ್ ಜೈಂಟ್ಸ್, ಮೇ 18ರಂದು ನಡೆಯುವ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಗೆದ್ದರೆ ಸುಲಭವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ.
RCB:
ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇ-ಆಫ್ ಹಂತಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದ್ದರು, ಆರ್ಸಿಬಿ ತಂಡದ ರನ್ ರೇಟ್ -0.323 ಇರುವುದರಿಂದ ನಾಲ್ಕರ ಘಟ್ಟಕ್ಕೇರುವುದು ಸುಲಭವಲ್ಲ. ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೇಬಲ್ ಟಾಪರ್ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ 80 ರನ್ಗಳು ಅಥವಾ 10 ಓವರ್ ಬಾಕಿ ಇರುವಂತೆ ಗೆಲ್ಲಬೇಕಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಸೋತರೆ ಆರ್ಸಿಬಿ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿದಂತೆ.
DC & PBKS:
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮೇ 16(ಇಂದು) ನಡೆಯುವ ಮಹತ್ವದ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ಪಾಯಿಂಟ್ಸ್ ಟೇಬಲ್ನಲ್ಲಿ ಎರಡು ತಂಡಗಳು ಒಂದೇ ಸ್ಥಿತಿಯಲ್ಲಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಇದಲ್ಲದೆ ಪಂಜಾಬ್ ಕಿಂಗ್ಸ್, ಮೇ 21ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮೇ 22ರಂದು ಹೈದ್ರಾಬಾದ್ ವಿರುದ್ಧ ಹಣಾಹಣಿ ನಡೆಸಲಿದೆ. ಹೀಗಾಗಿ ಎರಡು ತಂಡಗಳಿಗೂ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.
KKR & SRH:
ಈ ಸೀಸನ್ನಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳ ಪ್ಲೇ-ಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಎರಡು ತಂಡಗಳು ತಮ್ಮ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆದ್ದರು ಕೇವಲ 14 ಅಂಕ ಪಡೆಯಲಿದೆ. ಒಂದೊಮ್ಮೆ ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದರೆ ಅಥವಾ ಪಂಜಾಬ್ ಹಾಗೂ ಡೆಲ್ಲಿ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನು ಗೆದ್ದರೆ, ಕೆಕೆಆರ್ ಹಾಗೂ ಎಸ್ಆರ್ಎಚ್ ತಂಡಗಳು ಪ್ಲೇ-ಆಫ್ ರೇಸ್ನಿಂದ ಹೊರಬೀಳಲಿದೆ. ಒಂದೊಮ್ಮೆ ಆರ್ಸಿಬಿ, ಡೆಲ್ಲಿ ಹಾಗೂ ಪಂಜಾಬ್ ತಂಡಗಳು ಬಾಕಿಯಿರುವ ಪಂದ್ಯಗಳಲ್ಲಿ ಸೋತರೆ ಐದು ತಂಡಗಳ ನಡುವಿನ ಪ್ಲೇ-ಆಫ್ ರೇಸ್ನಲ್ಲಿ +0.160 ರನ್ರೇಟ್ ಹೊಂದಿರುವ ಕೆಕೆಆರ್, ಸುಲಭವಾಗಿ ಪ್ಲೇ-ಆಫ್ ಹಂತಕ್ಕೇರಲಿದೆ.