IPl 2022 – Mohit Sharma – ಟೀಮ್ ಇಂಡಿಯಾದ ವೇಗಿ, ಐಪಿಎಲ್ ಪರ್ಪಲ್ ಕ್ಯಾಪ್ ವಿನ್ನರ್ ಈಗ ನೆಟ್ ಬೌಲರ್..!
ಮೋಹಿತ್ ಶರ್ಮಾ.. ಟೀಮ್ ಇಂಡಿಯಾದ ವೇಗಿ. 2014ರ ಟಿ-20 ವಿಶ್ವಕಪ್ ಮತ್ತು 2015ರ ಏಕದಿನ ವಿಶ್ವಕಪ್ ಭಾರತ ತಂಡದ ಬೌಲರ್. ಅಷ್ಟೇ ಯಾಕೆ, 2014ರ ಐಪಿಎಲ್ ಟೂರ್ನಿಯ ಪರ್ಪಲ್ ಕ್ಯಾಪ್ ವಿನ್ನರ್. ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡಿದ್ದ ಆಟಗಾರ.
ಆದ್ರೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ 26 ಪಂದ್ಯಗಳನ್ನು ಆಡಿದ್ದು, 31 ವಿಕೆಟ್ ಗಳನ್ನು ಉರುಳಿಸಿದ್ದಾರೆ. 22ಕ್ಕೆ 4 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಹಾಗೇ ಎಂಟು ಟಿ-20 ಪಂದ್ಯಗಳಲ್ಲಿ ಆರು ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 86 ಐಪಿಎಲ್ ಪಂದ್ಯಗಳಲ್ಲಿ 92 ವಿಕೆಟ್ ಗಳನ್ನು ಕಬಳಿಸಿದ್ದಾರೆ. 14ಕ್ಕೆ 4 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ.
2013ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಟಿ-20 ಕ್ರಿಕೆಟ್ ಗೆ ಎಂಟ್ರಿಯಾಗಿದ್ದರು. ಆದ್ರೆ ಮೋಹಿತ್ ಶರ್ಮಾ ಅವರು 2015ರ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ.
ಐಪಿಎಲ್ ನಲ್ಲಿ 2013ರಿಂದ 2020ರವರೆಗೆ ಸಿಎಸ್ ಕೆ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
ದುರಾದೃಷ್ಟ ಅಂದ್ರೆ 2022ರ ಮೆಗಾ ಐಪಿಎಲ್ ನಲ್ಲಿ ಮೋಹಿತ್ ಶರ್ಮಾ ಅವರು ಅನ್ ಸೋಲ್ಡ್ ಆಗಿದ್ದರು. ಹೀಗಾಗಿ ನಿರಾಸೆ ಅನುಭವಿಸಿದ್ದ 33ರ ಹರೆಯದ ಮೋಹಿತ್ ಶರ್ಮಾ ಸುಮ್ಮನೆ ಕೂರಲಿಲ್ಲ. ಕ್ರಿಕೆಟ್ ಮೇಲಿನ ಪ್ರೀತಿ ಮತ್ತು ತನ್ನ ಅನುಭವವನ್ನು ಯುವ ಆಟಗಾರರ ಜೊತೆ ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.
ಹಾಗಂತ ಮೋಹಿತ್ ಶರ್ಮಾ ಅವರು ಯಾವುದೇ ತಂಡದ ಕೋಚ್ ಆಗಲಿಲ್ಲ. ಬದಲಾಗಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. Mohit Sharma – Purple Cap winner in 2014, now a net bowler
ಮೋಹಿತ್ ಶರ್ಮಾ ಅವರ ಈ ನಿರ್ಧಾರವನ್ನು ನೋಡಿದಾಗ ಅಚ್ಚರಿಯೂ ಆಗುತ್ತದೆ.. ಬೇಸರವೂ ಆಗುತ್ತದೆ. ಹೌದು, ಮೋಹಿತ್ ಶರ್ಮಾ ಅವರು ಗುಜರಾತ್ ಟೈಟಾನ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟ್ ನಲ್ಲಿ ಈ ರೀತಿಯ ಏರಿಳಿತಗಳನ್ನು ಕಾಣುವುದು ಇದೇನೂ ಮೊದಲ ಸಲವಲ್ಲ. ಕೊನೆಯ ಸಲವೂ ಅಲ್ಲ. ಅದೃಷ್ಟ ಮತ್ತು ದುರಾದೃಷ್ಟ ಎಲ್ಲಿ ಹೇಗೆ, ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಯಶಸ್ಸಿನ ಉತ್ತುಂಗದಲ್ಲಿದ್ದ ಮೋಹಿತ್ ಶರ್ಮಾ ಅವರು ಈಗ ಕೆಳಗಡೆ ಬಿದ್ದಿದ್ದಾರೆ. ಹಾಗಾಗಿ ಅವರು ನೆಟ್ ಬೌಲರ್ ಆಗಿದ್ದಾರೆ. ಯಾರಿಗೆ ಗೊತ್ತು.. ನೆಟ್ ಬೌಲರ್ ಆಗಿದ್ದ ಹಿರಿಯ ಆಟಗಾರ ತಂಡದಲ್ಲಿ ಕಾಣಿಸಿಕೊಳ್ಳಬಹುದು.. ಹಣೆಬರೆಹವನ್ನು ಬಲ್ಲವರು ಯಾರಿಲ್ಲ. ಆದ್ರೆ ಮೋಹಿತ್ ಶರ್ಮಾ ಅವರು ನೆಟ್ ಬೌಲರ್ ಆಗಿರುವ ವಿಷ್ಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.