ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಚುಟುಕು ಸಮರಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 26ರಿಂದ ಆರಂಭವಾಗುವ ಐಪಿಎಲ್ ಪಂದ್ಯಗಳನ್ನ ನೋಡಲು ಕೋಟ್ಯಾಂತರ ಫ್ಯಾನ್ಸ್ ಕಾಯುತ್ತಿದ್ದಾರೆ. ಇವೆಲ್ಲದರ ಬೆನ್ನಲ್ಲೇ ಮೈದಾನದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ಮಹಾರಾಷ್ಟ್ರ ಕ್ರೀಡಾ ಸಚಿವ ಸುನೀಲ್ ಕೇಧಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2022ರ ಐಪಿಎಲ್ ಪಂದ್ಯಾವಳಿಗೆ ಈಗಾಗಲೇ ಸಿದ್ಧತೆ ಆರಂಭಗೊಂಡಿದ್ದು, ಮುಂಬೈನ ನಾಲ್ಕು ಮೈದಾನಗಳಲ್ಲಿ ನಡೆಯಲಿದೆ. ವಾಂಖೆಡೆ ಕ್ರೀಡಾಂಗಣ, ಮುಂಬೈ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಬ್ರಬೋರ್ನ್ ಸ್ಟೇಡಿಯಂ), ನವಿ ಮುಂಬೈನಲ್ಲಿರುವ ಡಿವೈ ಪಾಟೀಲ್ ಕ್ರೀಡಾಂಗಣ ಹಾಗೂ ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಅವಕಾಶ ಸಿಗುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲವಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಾರಾಷ್ಟ್ರ ಕ್ರೀಡಾ ಸಚಿವ ಸುನೀಲ್ ಕೇಧಾರ್, ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಭಾವಿಸಿದ್ದು, ಇದೇ ಪರಿಸ್ಥಿತಿ ಮುಂದುವರಿಯುವ ವಿಶ್ವಾಸವಿದೆ. ಹೀಗಾಗಿ ಐಪಿಎಲ್ ಪಂದ್ಯಗಳು ನಡೆಯುವ ಸಂದರ್ಭದಲ್ಲೂ ಇದೇ ವಾತಾವರಣ ಇದ್ದಲ್ಲಿ, ಪ್ರೇಕ್ಷಕರಿಗೆ ಮೈದಾನಕ್ಕೆ ತೆರಳಿ ಐಪಿಎಲ್ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸುವ ವಿಶ್ವಾಸವಿದೆ ಎಂದಿದ್ದಾರೆ.
ಐಪಿಎಲ್ ಪಂದ್ಯಾವಳಿ ಎಲ್ಲಾ ಪಂದ್ಯಗಳು ಪುಣೆ ಮತ್ತು ಮುಂಬೈನಲ್ಲಿ ನಡೆಸಲು ಅವಕಾಶ ಸಿಕ್ಕಿದ್ದು, ಮಹಾರಾಷ್ಟ್ರ ಕ್ರೀಡಾ ಸಚಿವನಾಗಿ ಬಿಸಿಸಿಐಗೆ ಕೃತಜ್ಞತೆ ತಿಳಿಸುತ್ತೇನೆ. ಆದರೆ ಬಯೋ ಬಬಲ್ ವ್ಯವಸ್ಥೆ, ಎಷ್ಟು ಮಂದಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಬೇಕು ಎಂಬಿತ್ಯಾದಿ ವಿಷಯಗಳ ಕುರಿತಂತೆ ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ನಿರ್ಧರಿಸಲಾಗುವುದು ಎಂದು ಸಚಿವ ಸುನೀಲ್ ಕೇಧಾರ್ ತಿಳಿಸಿದ್ದಾರೆ.