ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದ್ದ ಹಾಗೂ ಕೊನೆ ಬಾಲ್ವರೆಗೂ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ಸೆಣೆಸಾಟದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ರನ್ಗಳ ರೋಚಕ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್, 15ನೇ ಸೀಸನ್ ಐಪಿಎಲ್ನ ಪ್ಲೇ-ಆಫ್ ಹಂತಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕ್ವಿಂಟನ್ ಡಿಕಾಕ್(140*) ಹಾಗೂ ಕೆ.ಎಲ್.ರಾಹುಲ್(68*) ರನ್ಗಳ ನೆರವಿನಿಂದ 20 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 210 ರನ್ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್, ಬ್ಯಾಟ್ಸ್ಮನ್ಗಳ ಕೆಚ್ಚೆದೆಯ ಹೋರಾಟದ ನಡುವೆಯೂ 20 ಓವರ್ಗಳಲ್ಲಿ 8 ವಿಕೆಟ್ಗೆ 208 ರನ್ಗಳಿಸುವ ಮೂಲಕ 2 ರನ್ಗಳ ವಿರೋಚಿತ ಸೋಲು ಕಂಡಿತು. ಈ ಸೋಲಿನೊಂದಿಗೆ ನೈಟ್ರೈಡರ್ಸ್ ತಂಡದ ಪ್ಲೇ-ಆಫ್ ಕನಸು ಸಹ ಭಗ್ನಗೊಂಡಿತು.
![IPL 2022; ರೋಚಕ ಫೈಟ್ನಲ್ಲಿ ಕೆಕೆಆರ್ ʼಲಕ್ʼ ಕಸಿದ ಲಕ್ನೋ: ಪ್ಲೇ-ಆಫ್ ಪ್ರವೇಶಿಸಿದ ರಾಹುಲ್ ಪಡೆ 3 DKOOK RAHUL](http://sportskarnataka.com/wp-content/uploads/2022/05/DKOOK-RAHUL.jpg)
ಡಿಕಾಕ್ ಸ್ಪೋಟಕ ಶತಕ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಕ್ನೋ ಸೂಪರ್ ಜೈಂಟ್ಸ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ 140* ರನ್(70 ಬಾಲ್, 10 ಬೌಂಡರಿ, 10 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಕೆಆರ್ ಬೌಲರ್ಗಳನ್ನ ಮನಬಂದಂತೆ ದಂಡಿಸಿದ ಡಿಕಾಕ್, ಅಬ್ಬರದ ಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಕೆ.ಎಲ್.ರಾಹುಲ್ 68* ರನ್(51 ಬಾಲ್, 3 ಬೌಂಡರಿ, 4 ಸಿಕ್ಸ್) ಸಹ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಎದುರಾಳಿ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಇವರಿಬ್ಬರು ಮೊದಲ ವಿಕೆಟ್ಗೆ ಅಜೇಯ 210 ರನ್ಗಳ ಜೊತೆಯಾಟವಾಡಿದರು. ಡಿಕಾಕ್ ಹಾಗೂ ರಾಹುಲ್ ಬ್ಯಾಟಿಂಗ್ ಎದುರು ಸಂಪೂರ್ಣ ಶರಣಾದ ಕೆಕೆಆರ್ ಬೌಲರ್ಗಳು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
![IPL 2022; ರೋಚಕ ಫೈಟ್ನಲ್ಲಿ ಕೆಕೆಆರ್ ʼಲಕ್ʼ ಕಸಿದ ಲಕ್ನೋ: ಪ್ಲೇ-ಆಫ್ ಪ್ರವೇಶಿಸಿದ ರಾಹುಲ್ ಪಡೆ 4 Shreyas Iyer](http://sportskarnataka.com/wp-content/uploads/2022/05/Shreyas-Iyer.jpg)
ಕೆಕೆಆರ್ ಸಂಘಟಿತ ಆಟ:
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 211 ರನ್ಗಳ ಕಠಿಣ ಟಾರ್ಗೆಟ್ ಬೆನ್ನತ್ತಿದ ಕೆಕೆಆರ್, ಆರಂಭದಲ್ಲಿ ವೆಂಕಟೇಶ್ ಅಯ್ಯರ್(0) ಹಾಗೂ ಅಭಿಜಿತ್ ಥೋಮರ್(4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಕಣಕ್ಕಿಳಿದ ನಿತೀಶ್ ರಾಣ 42(22), ನಾಯಕ ಶ್ರೇಯಸ್ ಅಯ್ಯರ್ 50(29) ಹಾಗೂ ಸ್ಯಾಮ್ ಬಿಲ್ಲಿಂಗ್ಸ್ 36(24) ಬಿರುಸಿನ ಆಟದಿಂದ ತಂಡದ ಗೆಲುವಿನ ಆಸೆ ಜೀವಂತ ಇರಿಸಿದರು. ಈ ವೇಳೆ ಕಣಕ್ಕಿಳಿದ ಆಂಡ್ರೆ ರಸೆಲ್(5) ಬಹುಬೇಗನೆ ಔಟಾಗಿದ್ದು, ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ ಉಂಟು ಮಾಡಿತು.
![IPL 2022; ರೋಚಕ ಫೈಟ್ನಲ್ಲಿ ಕೆಕೆಆರ್ ʼಲಕ್ʼ ಕಸಿದ ಲಕ್ನೋ: ಪ್ಲೇ-ಆಫ್ ಪ್ರವೇಶಿಸಿದ ರಾಹುಲ್ ಪಡೆ 5 Rinku Singh 1](http://sportskarnataka.com/wp-content/uploads/2022/05/Rinku-Singh-1.jpg)
ರಿಂಕು-ನರೈನ್ ಹೋರಾಟ:
16.4 ಓವರ್ಗಳಲ್ಲಿ 150 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್, ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ರಿಂಕು ಸಿಂಗ್ 40(15) ಹಾಗೂ ಸುನೀಲ್ ನರೈನ್ 21*(7) ಸ್ಪೋಟಕ ಆಟವಾಡಿದರು. ಗೆಲುವಿಗಾಗಿ ಕೊನೆ ಓವರ್ವರೆಗೂ ಛಲ ಬಿಡದೆ ಹೋರಾಡಿದ ಈ ಜೋಡಿ 7ನೇ ವಿಕೆಟ್ಗೆ 58 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದರೆ ಗೆಲುವಿನ ಹೊಸ್ತಿಲಲ್ಲಿ ರಿಂಕು ಸಿಂಗ್ ಔಟಾಗಿದ್ದು, ಕೆಕೆಆರ್ ಗೆಲುವಿನ ಆಸೆಗೆ ತಣ್ಣೀರೆರಿಚಿತು.
ಮಿಂಚಿದ ಮೋಸಿನ್ ಖಾನ್:
ಬ್ಯಾಟಿಂಗ್ನಲ್ಲಿ ಮಿಂಚಿದ್ದ ಲಕ್ನೋ ತಂಡಕ್ಕೆ ಬೌಲರ್ಗಳು ಸಹ ಕೈಹಿಡಿದರು. ಪ್ರಮುಖವಾಗಿ ಇನ್ನಿಂಗ್ಸ್ ಆರಂಭದಲ್ಲೇ ಮಿಂಚಿದ ಮೋಸಿಸ್ ಖಾನ್(3/20) ಕೆಕೆಆರ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಸಾಥ್ ನೀಡಿದ ಮಾರ್ಕಸ್ ಸ್ಟಾಯ್ನಿಸ್(3/23) ಕೊನೆ ಓವರ್ನಲ್ಲಿ 2 ವಿಕೆಟ್ ಪಡೆದು ಗೆಲುವಿನ ಹೀರೋ ಆಗಿ ಮಿಂಚಿದರು. ಉಳಿದಂತೆ ಕೆ.ಗೌತಮ್ ಹಾಗೂ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
![IPL 2022; ರೋಚಕ ಫೈಟ್ನಲ್ಲಿ ಕೆಕೆಆರ್ ʼಲಕ್ʼ ಕಸಿದ ಲಕ್ನೋ: ಪ್ಲೇ-ಆಫ್ ಪ್ರವೇಶಿಸಿದ ರಾಹುಲ್ ಪಡೆ 6 Evin Lewis 1](http://sportskarnataka.com/wp-content/uploads/2022/05/Evin-Lewis-1.jpg)
ದಿಕ್ಕು ಬದಲಿಸಿದ ಕ್ಯಾಚ್:
ರಿಂಕು ಸಿಂಗ್ ಹಾಗೂ ಸುನೀಲ್ ನರೈನ್ ಸ್ಪೋಟಕ ಬ್ಯಾಟಿಂಗ್ನಿಂದಾಗಿ ಕೆಕೆಆರ್ ಗೆಲುವಿಗೆ ಕೊನೆ ಓವರ್ನಲ್ಲಿ 21 ರನ್ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ದಾಳಿಗಿಳಿದ ಮಾರ್ಕಸ್ ಸ್ಟಾಯ್ನಿಸ್ ಬೌಲಿಂಗ್ನಲ್ಲಿ, ರಿಂಕು ಸಿಂಗ್ ಮೊದಲ ಮೂರು ಬಾಲ್ಗಳಲ್ಲಿ 4, 6, 6, 2 ಸಿಡಿಸಿದರು. ಪರಿಣಾಮ ಕೊನೆಯ 2 ಬಾಲ್ಗಳಲ್ಲಿ 3 ರನ್ಬೇಕಿತ್ತು. ಈ ವೇಳೆ ಓವರ್ನ 4ನೇ ಬಾಲ್ನಲ್ಲಿ ಎವಿನ್ ಲೆವಿಸ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು.