IPL 2022- DC vs LSG Macth report – ಡೆಲ್ಲಿ ಕ್ಯಾಪಿಟಲ್ಸ್ ಗೆ ಮತ್ತೊಂದು ಸೋಲು.. ಎಲ್ ಎಸ್ ಜಿಗೆ ಮೂರನೇ ಗೆಲುವು..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ಗೆಲುವನ್ನು ದಾಖಲಿಸಿದೆ.
ಟೂರ್ನಿಯ 15ನೇ ಪಂದ್ಯದಲ್ಲಿ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪರಾಭವಗೊಳಿಸಿತು.
ಟೂರ್ನಿಯ ನಾಲ್ಕನೇ ಪಂದ್ಯವನ್ನು ಆಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರು ಗೆಲುವು ಮತ್ತು ಒಂದು ಸೋಲಿನೊಂದಿಗೆ ಆರು ಅಂಕಗಳನ್ನು ಪಡೆದುಕೊಂಡು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯದ ಗೆಲುವಿನ ನಂತರ ಸತತ ಎರಡನೇ ಸೋಲು ಅನುಭವಿಸಿದೆ.
ಮುಂಬೈನ ಡಿ ವೈ ಪಾಟೀಲ್ ಅಂಗಣದಲ್ಲಿ ಟಾಸ್ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.
ಆರಂಭಿಕ ಪೃಥ್ವಿ ಶಾ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳನ್ನು ಬೆಚ್ಚಿ ಬೀಳಿಸಿದ್ರು. ಪೃಥ್ವಿ ಶಾ ಅವರ ಬೌಂಡರಿ ಮತ್ತು ಸಿಕ್ಸರ್ ಗಳ ಅಬ್ಬರಕ್ಕೆ ಸಹ ಆಟಗಾರ ಡೇವಿಡ್ ವಾರ್ನರ್ ಮೂಕ ಪ್ರೇಕ್ಷಕರಾದ್ರು. 30 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಪೃಥ್ವಿ ಶಾ ಲಕ್ನೋ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡಿದ್ರು. ಅಂತಿಮವಾಗಿ ಗೌತಮ್ ಎಸೆತದಲ್ಲಿ 61 ರನ್ ಗಳಿಸಿದ್ದ ಪೃಥ್ವಿ ಶಾ ಪೆವಿಲಿಯನ್ ಸೇರಿಕೊಂಡ್ರು. ಪೃಥ್ವಿ ಶಾ 9 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 61 ರನ್ ಗಳಿಸಿದ್ರು. ಅದು ಕೂಡ 34 ಎಸೆತದಲ್ಲಿ. ಇನ್ನೊಂದೆಡೆ ಡೇವಿಡ್ ವಾರ್ನರ್ ಜೊತೆ ಸೇರಿಕೊಂಡು ಮೊದಲ ವಿಕೆಟ್ ಗೆ 67 ರನ್ ಕಲೆ ಹಾಕಿದ್ದರು.
ಪೃಥ್ವಿ ಶಾ ವಿಕೆಟ್ ಬೀಳುತ್ತಿದ್ದಂತೆ ಡೇವಿಡ್ ವಾರ್ನರ್ 4 ರನ್ ಹಾಗೂ ರೊವ್ಮನ್ ಪೊವೆಲ್ 3 ರನ್ ಗಳಿಸಿ ರವಿ ಬಿಷ್ಣೋಯ್ ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ರು. ಆದ್ರೂ ರಿಷಬ್ ಪಂತ್ ಮತ್ತು ಸಫ್ರಾಝ್ ಖಾನ್ ಅವರು ಸಮಯೋಜಿತ ಆಟವನ್ನಾಡಿದ್ರು. ರಿಷಬ್ ಪಂತ್ ಅಜೇಯ 39 ರನ್ ಗಳಿಸಿದ್ರೆ, ಸಫ್ರಾಝ್ ಖಾನ್ ಅಜೇಯ 36 ರನ್ ದಾಖಲಿಸಿದ್ರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವನ್ನೇ ನೀಡಿದ್ರು. ಇವರಿಬ್ಬರು ಮೊದಲ ವಿಕೆಟ್ ಗೆ 73 ರನ್ ಕಲೆ ಹಾಕಿದ್ದರು. ಈ ಹಂತದಲ್ಲಿ 24 ರನ್ ಗಳಿಸಿದ್ದ ಕೆ.ಎಲ್. ರಾಹುಲ್ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದ್ರು. ಮತ್ತೊಂದೆಡೆ ಎವಿನ್ ಲೆವಿಸ್ 5 ರನ್ ಹಾಗೂ ದೀಪಕ್ ಹೂಡಾ 11 ರನ್ ಗಳಿಸಿ ನಿರಾಸೆಗೊಳಿಸಿದ್ರು.
ಆದ್ರೂ ಕ್ವಿಂಟನ್ ಡಿ ಕಾಕ್ ಬಿರುಸಿನ ಆಟವನ್ನಾಡಿದ್ರು. 52 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 82 ರನ್ ದಾಖಲಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು. IPL 2022- DC vs LSG Macth report De Kock dazzles as Super Giants slay Delhi Capitals in thriller
ಕೊನೆಯ ಕ್ಷಣದಲ್ಲಿ ಕೃನಾಲ್ ಪಾಂಡ್ಯ ಮತ್ತು ಆಯೂಷ್ ಬಡೋನಿ ಜವಾಬ್ದಾರಿಯುತವಾದ ಆಟವನ್ನಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಕೃನಾಲ್ ಪಾಂಡ್ಯ ಅಜೇಯ 19 ರನ್ ಹಾಗೂ ಆಯೂಷ್ ಬಡೋನಿ ಅಜೇಯ 10 ರನ್ ದಾಖಲಿಸಿದ್ರು. ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ 19.4 ಎಸೆತಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಮನಮೋಹಕವಾಗಿ ಬ್ಯಾಟ್ ಬೀಸಿದ ಕ್ವಿಂಟನ್ ಡಿ ಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಆದ್ರೂ ಈ ಪಂದ್ಯದಲ್ಲಿ ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಯನ್ನು ಮರೆಯಲು ಸಾಧ್ಯವಿಲ್ಲ.