IPL 2022 Auction -ಕೊನೆಗೂ ಆರ್ ಸಿಬಿ ತಂಡಕ್ಕೆ ಸಿಕ್ಕ ಕನ್ನಡಿಗ ಆಟಗಾರ ಯಾರು ?
ಆಟ ಯಾವುದೇ ಇರಲಿ.. ಅಲ್ಲಿ ಜಾತಿ, ಧರ್ಮ, ಭಾಷೆ, ನೆಲ ಮೊದಲಾದ ವಿಚಾರಗಳನ್ನು ತಂದು ವಿವಾದ ಸೃಷ್ಟಿಸುವುದು ಸರಿಯಲ್ಲ. ಆದ್ರೂ ಕೆಲವೊಂದು ನಮ್ಮ ಊರಿನ ತಂಡದಲ್ಲಿ ನಮ್ಮ ಊರಿನವರಿದ್ರೂ ಅವರನ್ನು ಸೇರಿಕೊಳ್ಳದೇ ಇದ್ದಾಗ ಅಸಮಾಧಾನ, ಬೇಸರ, ನಿರಾಸೆ ಎಲ್ಲವೂ ಆಗುತ್ತದೆ. ಇದು ಸಹಜ ಕೂಡ.
ಹೌದು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗೆ ನೆಚ್ಚಿನ ಐಪಿಎಲ್ ತಂಡ. ಕಳೆದ 14 ವರ್ಷಗಳಿಂದ ಕಪ್ ಗೆಲ್ಲದೇ ಇದ್ರೂ ಆರ್ ಸಿಬಿ ಮೇಲಿನ ಪ್ರೀತಿ ಅಭಿಮಾನಿಗಳಿಗೆ ಒಂಚೂರು ಕಮ್ಮಿಯಾಗಿಲ್ಲ.
ಕಾರಣ ನಮ್ಮ ಬೆಂಗಳೂರು. ನಮ್ಮ ಕನ್ನಡದ ಹೆಮ್ಮೆಯ ಸಂಕೇತ.. ನಮ್ಮ ಕರ್ನಾಟಕವನ್ನು ಪ್ರತಿಬಿಂಬಿಸುವ ತಂಡ. ಹಾಗಾಗಿಯೇ ಕನ್ನಡಿಗರಿಗೆ ಆರ್ ಸಿಬಿ ಅಂದ್ರೆ ಅಚ್ಚು ಮೆಚ್ಚು.
ಆದ್ರೆ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಗೆ ಕನ್ನಡ ನೆಲದ ಆಟಗಾರರು ಬೇಕಾಗಿಲ್ಲ.
ಮನೀಷ್ ಪಾಂಡೆ, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್ ಸೇರಿದಂತೆ ಅನೇಕ ಆಟಗಾರರನ್ನು ಆರ್ ಸಿಬಿ ತಂಡದಲ್ಲಿ ಸೇರಿಸಿಕೊಳ್ಳುವಂತಹ ಮನಸು ಕೂಡ ಮಾಡಲಿಲ್ಲ.
ಯುವ ಪ್ರತಿಭೆಗಳಾದ ದೇವದತ್ ಪಡಿಕ್ಕಲ್, ಪ್ರಸಿದ್ದ್ ಕೃಷ್ಣ ಅವರನ್ನು ಕೂಡ ಹರಾಜಿನಲ್ಲಿ ಜಿದ್ದಿಗೆ ಬಿದ್ದು ಖರೀದಿ ಕೂಡ ಮಾಡಿಲ್ಲ.
ಕೊನೆಗೂ ತಂಡದಲ್ಲಿ ಒಬ್ಬ ಕನ್ನಡಿಗ ಆಟಗಾರ ಇರಬೇಕಲ್ವಾ ? ಆ ಕಾರಣಕ್ಕಾಗಿ ಕರ್ನಾಟಕದ ಯುವ ಪ್ರತಿಭೆ ಅನೀಶ್ವರ್ ಗೌತಮ್ ಅವರನ್ನು 20 ಲಕ್ಷ ರೂಪಾಯಿಗೆ ಆರ್ ಸಿಬಿ ಖರೀದಿ ಮಾಡಿದೆ.
ಅನೀಶ್ವರ್ ಗೌತಮ್ ಅವರು 19 ವಯೋಮಿತಿ ವಿಶ್ವ ಕಪ್ ಗೆದ್ದ ಭಾರತ ತಂಡದ ಆಟಗಾರ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡುವ ಎ. ಗೌತಮ್ ಅವರನ್ನು ಆರ್ ಸಿಬಿ ಮೂಲ ಬೆಲೆಗೆ ಖರೀದಿ ಮಾಡಿದೆ.
ಹೀಗಾಗಿ ಕನ್ನಡಿಗರಿಗೆ ಸ್ವಲ್ಪ ಮಟ್ಟಿನ ಸಮಾಧಾನವಾಗಿದೆ. ನಮ್ಮ ಆರ್ ಸಿಬಿ ತಂಡದಲ್ಲಿ ಒಬ್ಬನಾದ್ರೂ ಕನ್ನಡಿಗ ಆಟಗಾರ ಇದ್ದಾನೆ ಅನ್ನೋ ಸಮಾಧಾನವಿದೆ.