ಐಪಿಎಲ್ 2022ರ ಆರಂಭಿಕ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂತಸದ ಸುದ್ದಿ ಕೇಳಿ ಬಂದಿದ್ದು, ಗಾಯದ ಸಮಸ್ಯೆ ಕಾರಣದಿಂದ ಐಪಿಎಲ್ನಲ್ಲಿ ಪಾಲ್ಗೊಳ್ಳುವ ಅನುಮಾನ ಮೂಡಿಸಿದ್ದ ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್, ಶೀಘ್ರವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರಿಕೊಳ್ಳಲಿದ್ದಾರೆ.
ಗಾಯದ ಸಮಸ್ಯೆ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ವೈಟ್ ಬಾಲ್ ಸರಣಿಯಿಂದ ಹೊರಗುಳಿದಿರುವ ಮಿಚೆಲ್ ಮಾರ್ಷ್, ಈ ಬಾರಿಯ ಐಪಿಎಲ್ನಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ಇದೀಗ ಈ ಆತಂಕ ದೂರವಾಗಿದ್ದು, ಗಾಯದ ಸಮಸ್ಯೆ ಎದುರಿಸುತ್ತಿರುವ ಮಿಚೆಲ್ ಮಾರ್ಷ್ ಐಪಿಎಲ್ನಲ್ಲಿ ಆಡುವ ನಿರ್ಧಾರಕೈಗೊಂಡಿದ್ದಾರೆ.
ಹೀಗಾಗಿ ಪಾಕಿಸ್ತಾನದಿಂದ ನೇರವಾಗಿ ಭಾರತಕ್ಕೆ ಆಗಮಿಸಲಿರುವ ಮಿಚೆಲ್ ಮಾರ್ಷ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಕೂಡಿಕೊಳ್ಳಲಿದ್ದಾರೆ. ಮಾರ್ಷ್ ಅವರ ಐಸೋಲೇಷನ್ ಅವಧಿ ಪೂರ್ಣಗೊಂಡ ಬಳಿಕ ಫಿಸಿಯೋಥೆರಪಿಸ್ಟ್ ಪ್ಯಾಟ್ ಫರ್ಹಾರ್ಟ್ ಅವರು ಮಾರ್ಷ್ ಅವರ ಚೇತರಿಕೆ ಬಗ್ಗೆ ನಿಗಾವಹಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಆಸೀಸ್ ತಂಡದ ಪ್ರಮುಖ ಆಟಗಾರನಾಗಿರುವ ಮಾರ್ಷ್, ಕಳೆದ ವರ್ಷ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ವಿಶ್ವ ಕ್ರಿಕೆಟ್ನ ಆಲ್ರೌಂಡರ್ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮಿಚೆಲ್ ಮಾರ್ಷ್ ಅವರನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ 6.5 ಕೋಟಿಗೆ ಖರೀದಿಸಿತ್ತು. ಐಪಿಎಲ್ನಲ್ಲಿ ಜಯದ ಆರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ವಿದೇಶಿ ಆಟಗಾರರ ಕೊರತೆ ಎದುರಿಸುತ್ತಿತ್ತು. ಇದೀಗ ಮಾರ್ಷ್ ಆಗಮನ ಡೆಲ್ಲಿ ತಂಡದ ಬಲ ಹೆಚ್ಚಿಸಲಿದೆ.