ಸೂರ್ಯ ಕುಮಾರ್ ಯಾದವ್ ಅವರ ಶತಕದಾಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ 65 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಮೌಂಟ್ ಮೌಂಗನೂಯಿಯಲ್ಲಿ ನಡೆದ ಎರಡನೆ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ತಂಡ 18.5 ಓವರ್‍ಗಳಲ್ಲಿ 126 ರನ್‍ಗಳಿಗೆ ಆಲೌಟ್ ಆಯಿತು.
ಭಾರತ ಆರಂಭಿಕರಾಗಿ ಕಣಕ್ಕಿಳಿದ ಇಶನ್ ಕಿಶಾನ್ (36), ರಿಷಬ್ ಪಂತ್ (6) ಮೊದಲ ವಿಕೆಟ್‍ಗೆ 36 ರನ್ ಸೇರಿಸಿದರು. ಶ್ರೇಯಸ್ ಅಯ್ಯರ್ 13, ನಾಯಕ ಹಾರ್ದಿಕ್ ಪಾಂಡ್ಯ 13 ರನ್ ಹೊಡೆದರು. ಏಕಾಂಗಿ ಹೋರಾಟ ಮಾಡಿದ ಸೂರ್ಯ ಕುಮಾರ್ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ 49 ಎಸೆತದಲ್ಲಿ ಶತಕ ಸಿಡಿಸಿದರು. ಸೋಟಕ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ 51 ಎಸೆತದಲ್ಲಿ 11 ಬೌಂಡರಿ 7 ಸಿಕ್ಸರ್ ಸಿಡಿಸಿ ಅಜೇಯ 111 ರನ್ ಕಲೆ ಹಾಕಿದರು. ದೀಪಕ್ ಹೂಡಾ 0, ವಾಷಿಂಗ್ಟನ್ ಸುಂದರ್ 0, ಭುವನೇಶ್ವರ್ ಕುಮಾರ್ ಅಜೇಯ 11 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 34ಕ್ಕೆ3, ಲಾಕಿ ಫರ್ಗ್ಯೂಸನ್ 49ಕ್ಕೆ 2, ಸೋ 35ಕ್ಕೆ 1 ವಿಕೆಟ್ ಪಡೆದರು.
192 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಫಿನ್ ಅಲೆನ್ 0, ಡೆವೊನ್ ಕಾನ್ವೆ 25, ನಾಯಕ ಕೇನ್ ವಿಲಿಯಮ್ಸನ್ 61 ರನ್ (52 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೇನ್ ಫಿಲೀಪ್ಸ್ 12, ಡೆರಿಲ್ ಮಿಚೆಲ್ 10, ಆ್ಯಡಮ್ ಮಿಲ್ನೆ 6, ಸ್ಯಾಂಟ್ನರ್ 2 ರನ್ ಗಳಿಸಿದರು. 19ನೇ ಓವರ್‍ನಲ್ಲಿ ದೀಪಕ್ ಹೂಡಾ 3 ವಿಕೆಟ್ ಪಡೆದು ಮಿಂಚಿದರು.
ಭಾರತ ಪರ ದೀಪಕ್ ಹೂಡಾ 10ಕ್ಕೆ 4, ಚಾಹಲ್ 26ಕ್ಕೆ 2, ಮೊಹ್ಮದ್ ಸೀರಾಜ್ 24ಕ್ಕೆ 2 ವಿಕೆಟ್ ಪಡೆದರು.
ಟಿ20ಯಲ್ಲಿ ಸೂರ್ಯ 2ನೇ ಶತಕ
ಟಿ20 ಆವೃತ್ತಿಯಲ್ಲಿ ಅದ್ಭುತ ಲಯ ಮುಂದುವರೆಸಿರುವ ಸೂರ್ಯ ಕುಮಾರ್ ನಾಯಕ ರೋಹಿತ್ ಶರ್ಮಾ ಅವರ ದಾಖಲೆ ಸರಿಗಟ್ಟಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‍ನಲ್ಲಿ 2 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು. ನಾಯಕ ರೋಹಿತ್ ಶರ್ಮಾ 2018ರಲ್ಲಿ ಟಿ20 ಕ್ರಿಕೆಟ್‍ನಲ್ಲಿ ಅಂದು 2 ಶತಕ ಸಿಡಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ 191/6 (20 ಓವರ್)
ಸೂರ್ಯ ಕುಮಾರ್ ಅಜೇಯ 111, ಇಶನ್ ಕಿಶಾನ್ 36
ಟಿಮ್ ಸೌಥಿ 34ಕ್ಕೆ 3, ಫರ್ಗ್ಯೂಸನ್ 49ಕ್ಕೆ 2
ನ್ಯೂಜಿಲೆಂಡ್ 126 ಆಲೌಟ್ (18.5 ಓವರ್)
ಕೇನ್ ವಿಲಿಯಮ್ಸನ್ 61, ಡೆವೊನ್ ಕಾನ್ವೆ 25
ದೀಪಕ್ ಹೂಡಾ 10ಕ್ಕೆ 4, ಸೀರಾಜ್ 24ಕ್ಕೆ 2