ಬಾಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯವನ್ನು ತಲುಪಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು 14-21, 21-19, 21-14 ರಿಂದ ದಕ್ಷಿಣ ಕೊರಿಯಾದ ಸಿಮ್ ಯುಜಿನ್ ಅವರ ವಿರುದ್ಧ ಒಂದು ಗಂಟೆ ಆರು ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
ಮೊದಲ ಗೇಮ್ ನಲ್ಲಿ ಉಭಯ ಆಟಗಾರ್ತಿಯರು ಅಂಕಗಳಿಸುತ್ತಾ ಸಾಗಿದರು. ಈ ಆಟಗಾರ್ತಿಯರು ತಲಾ 10 ಅಂಕಗಳನ್ನು ಕಲೆ ಹಾಕಿದರು. ಆದರೆ ಈ ಗೇಮ್ ನಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಮೇಲುಗೈ ಸಾಧಿಸಿದರು.
ಎರಡನೇ ಗೇಮ್ ನ ಆರಂಭದಲ್ಲಿ ಆಟಗಾರ್ತಿಯರು ಜಿದ್ದಾಜಿದ್ದಿನ ಆಟದ ಪ್ರದರ್ಶನ ನೀಡಿದರು. ಸಿಂಧು 5-7ರಿಂದ ಹಿನ್ನಡೆ ಅನುಭವಿಸಿದರು.ಬಳಿಕ ಸಿಂಧು ಸತತ 9 ಅಂಕಗಳನ್ನು ಕಲೆ ಹಾಕಿದರು. ಅಲ್ಲದೆ ಅಂಕಗಳಿಕೆಯಲ್ಲಿ ಅಂತರವನ್ನು ಕಾಯ್ದುಕೊಂಡರು. ಪರಿಣಾಮ ಈ ಗೇಮ್ ನಲ್ಲಿ ಭಾರತೀಯ ಆಟಗಾರ್ತಿಯ ಕೈ ಮೇಲಾಯಿತು.
ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಸಿಂಧು ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಎದುರಾಳಿ ಆಟಗಾರ್ತಿಯ ತಂತ್ರವನ್ನು ಅರಿತು ಆಡಿ ಅಂಕಗಳನ್ನು ಕಲೆ ಹಾಕಿದರು. ಪರಿಣಾಮ ಸಿಂಧು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.
ಪುರಷರ ಡಬಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ ಸಾತ್ವಿಕ್ ಸಾಯ್ ರಾಜ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ 21-19, 21-19 ರಿಂದ ಮಲೇಷ್ಯಾ ಜೋಡಿ ವಿರುದ್ಧ ಜಯ ಸಾಧಿಸಿದರು.