ಭಾರತದ ಸ್ಟಾರ್ ಆಟಗಾರರಾದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ.
ಮಂಗಳವಾರ ತಡ ರಾತ್ರಿ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ರೋಹನ್ ಹಾಗೂ ಕೇನಡಾದ ಡೆನಿಸ್ ಶಪೊವಲೊವ್ ಜೋಡಿ ಎರಡು ನೇರ ಸೆಟ್ ಗಳಲ್ಲಿ ಆಘಾತ ಅನುಭವಿಸಿತು. ಬೋಪಣ್ಣ ಹಾಗೂ ಶಪೊವಲೊವ್ ಜೋಡಿ 2-6, 1-6 ರಿಂದ ಆರನೇ ಶ್ರೇಯಾಂಕಿತ ನೆದರ್ಲೆಂಡ್ಸ್ ನ ವೆಸ್ಲಿ ಕೂಲಾಫ್ ಮತ್ತು ಬ್ರಿಟನ್ ನ ನೀಲ್ ಸ್ಕುಪಸ್ಕಿ ವಿರುದ್ಧ ಸೋಲು ಕಂಡಿತು.
ಈ ಪಂದ್ಯದಲ್ಲಿ ವಿಜೇತ ಜೋಡಿ ಮೊದಲ ಸರ್ವ್ ನಲ್ಲಿ 32 ಅಂಕಗಳನ್ನು ಕಲೆ ಹಾಕಿದರೆ, ಸರ್ವಿಸ್ ವೇಳೆ 8 ಗೇಮ್ ಗಳನ್ನು ತನ್ನದಾಗಿಸಿಕೊಂಡಿದೆ. ಈ ಲೆಕ್ಕಾಚಾರದಲ್ಲಿ ರೋಹಿನ್ ಜೋಡಿ ಕೊಂಚ ಹಿಂದೆ ಕಂಡಿತು. ಉಳಿದಂತೆ ಪಂದ್ಯದ ಯಾವುದೇ ಹಂತದಲ್ಲೂ ಬೋಪಣ್ಣ ಜೋಡಿ ಪುಟಿದೇಳುವ ಸೂಚನೆ ನೀಡಲೇ ಇಲ್ಲ. ಪರಿಣಾಮ ಸೆಮಿಫೈನಲ್ಸ್ ಹಂತ ಪ್ರವೇಶಿಸುವ ಆಸೆ ಕಮರಿದೆ.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯಂನ ಕಸ್ಟರ್ನ್ ಫ್ಲಿಪ್ ಕೆನ್ಸ್ ಜಿದ್ದಾಜಿದ್ದಿನ ಹೋರಾಟ ನಡೆಸಿ ನಿರಾಸೆ ಅನುಭವಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಮಿರ್ಜಾ ಜೋಡಿ 3-6, 6(3)-7(7) ರಿಂದ ಸೋಲು ಕಂಡು ಟೂರ್ನಿಯಿಂದ ಹೊರ ನಡೆಯಿತು.