ಹ್ಯಾಲಿಲ್ಟನ್ನ ಸೆಡಾನ್ ಪಾರ್ಕ್ನಲ್ಲಿ ಭಾರತದ ವನಿತೆಯರು ಆಡಿದ್ದೇ ಆಟವಾಗಿತ್ತು. ಸ್ಮೃತಿ ಮಂಧಾನಾ ಮತ್ತು ಹರ್ಮನ್ ಪ್ರಿತ್ ಕೌರ್ ಕೆರಿಬಿಯನ್ ಬೌಲರ್ ಗಳ ಬೆಂಡೆತ್ತಿದರೆ, ಬೌಲರ್ ಗಳು ವಿಂಡೀಸ್ ಬ್ಯಾಟ್ಸ್ ಮನ್ ಗಳ ಹುಟ್ಟಡಗಿಸಿದರು. ಡಾಟಿನ್ ಮತ್ತು ಹೇಲಿ ಕಡೆಯಿಂದ ಪ್ರತಿರೋಧ ಬಂದರೂ ಕೊನೆಯಲ್ಲಿ ಅದು ಲೆಕ್ಕಕ್ಕೆಸಿಗಲಿಲ್ಲ. ಭಾರತ 155 ರನ್ಗಳ ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಮೇಲಕ್ಕೇರಿತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತ್ತು. ಸ್ಮೃತಿ ಮಂಧಾನಾ ಮತ್ತು ಯಸ್ತಿಕಾ ಭಾಟಿಯಾ ಬೀಡು ಬೀಸಿನ ಆರಂಭ ತಂದುಕೊಟ್ಟರು. ಭಾಟಿಯಾ ಕೇವಲ 21 ಎಸೆತಗಳಲ್ಲಿ 6 ಫೋರ್ಗಳ ಮೂಲಕ 31 ರನ್ ಗಳಿಸಿ ಔಟಾದರು. ನಾಯಕಿ ಮಿಥಾಲಿ ರಾಜ್ 5 ರನ್ಗಳಿಸಿ ಔಟಾದರೆ, ದೀಪ್ತಿ ಶರ್ಮಾ 15 ರನ್ಗಳಿಸಿ ಪವೆಲಿಯನ್ ಸೇರಿಕೊಂಡರು.
ಈ ಮಧ್ಯೆ ಸ್ಮೃತಿ ಮಂಧಾನಾ ಅರ್ಧಶತಕಗಳಿಸಿ ಮುನ್ನಡೆಯುತ್ತಿದ್ದರು. ಅವರಿಗೆ ಜೊತೆಯಾಗಿದ್ದು ಹರ್ಮನ್ಪ್ರಿತ್ ಕೌರ್. ಈ ಜೋಡಿ ರನ್ ರೇಟ್ ವೇಗವನ್ನೂ ಹೆಚ್ಚಿಸಿತು. ಬೌಂಡರಿಗಳು ಮತ್ತು ಸಿಕ್ಸರ್ಗಳು ಸಲೀಸಾಗಿ ಸಿಡಿದವು. ಮಂಧಾನ ವಿಶ್ವಕಪ್ನಲ್ಲಿ 2ನೇ ಶತಕದ ಸಂಭ್ರಮ ಆಚರಿಸಿಕೊಂಡರು. ಮಂಧಾನಾ 19 ಎಸೆತಗಳಲ್ಲಿ 13 ಫೋರ್ ಮತ್ತು 2 ಸಿಕ್ಸರ್ಗಳ ಮೂಲಕ 123 ರನ್ಗಳಿಸಿ ಔಟಾದರು.
ಹರ್ಮನ್ ಪ್ರಿತ್ ಕೂಡ ಬಿರುಸಿನ ಆಟಕ್ಕೆ ಇಳಿದರು. ಅಷ್ಟೇ ಅಲ್ಲ ವಿಶ್ವಕಪ್ನಲ್ಲಿ 3ನೇ ಶತಕದ ದಾಖಲೆ ಬರೆದರು. ಆದರೆ ರಿಚಾ ಘೋಷ್ 5 ರನ್ಗಳಿಸಿ ಔಟಾದರು. ಹರ್ಮನ್ 107 ಎಸೆತಗಳಲ್ಲಿ 10 ಫೋರ್ ಮತ್ತು 2 ಸಿಕ್ಸರ್ಗಳ ಮೂಲಕ 109 ರನ್ಗಳಿಸಿ ಔಟಾದರರು. ಕೊನೆಯಲ್ಲಿ ಭಾರತ ಪೂಜಾ ವಸ್ತ್ರಾರ್ಕರ್ (10) ಮತ್ತು ಜುಲಾನ್ ಗೋಸ್ವಾಮಿ (2) ವಿಕೆಟ್ ಕಳೆದುಕೊಂಡಿತು. ಭಾರತ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 317 ರನ್ಗಳಿಸಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಗೆ ಡಿಯಾಂಡ್ರ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಸ್ಪೋಟಕ ಆರಂಭ ತಂದುಕೊಟ್ಟರು. ಈ ಜೋಡಿ ಕೇವಲ 12.2 ಓವರುಗಳಲ್ಲಿ 100 ರನ್ಗಳನ್ನು ಕಲೆಹಾಕಿ ಭಾರತದ ಪಾಳಯದಲ್ಲಿ ಆತಂಕ ಹುಟ್ಟಿಸಿತ್ತು. ಈ ಹಂತದಲ್ಲಿ ದಾಳಿಗಿಳಿದ ಸ್ನೇಹ್ ರಾಣಾ 46 ಎಸೆತಗಳಲ್ಲಿ 10 ಫೋರ್ ಮತ್ತು 1 ಸಿಕ್ಸರ್ ಮೂಲಕ 62 ರನ್ಗಳಿಸಿದ್ದ ಡಾಟಿನ್ ವಿಕೆಟ್ ಪಡೆದು ಬ್ರೇಕ್ ತಂದು ಕೊಟ್ಟರು. ಮೇಘನಾ ಸಿಂಗ್ ಕೆಸಿಯಾ ನೈಟ್ (5) ಮತ್ತು ನಾಯಕಿ ಸ್ಟೆಫಾನಿ ಟೇಲರ್ (1) ವಿಕೆಟ್ ಅನ್ನು ಪಡೆದು ವಿಂಡೀಸ್ ಮೇಲೆ ಒತ್ತಡ ಹೇರಿದರು.
36 ಎಸೆತಗಳಲ್ಲಿ 43 ರನ್ಗಳಿಸಿ ಮುನ್ನಡೆಯುತ್ತಿದ್ದ ಹೇಲಿ ಮ್ಯಾಥ್ಯೂಸ್ ಸ್ನೇಹ್ ರಾಣಾ ಪಾಲಾಯಿತು. ಕ್ಯಾಂಬೆಲ್ (11), ಹೆನ್ರಿ (7) ಮತ್ತು ಅಲಿನ್ (4) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅನಿಸಾ ಮೊಹಮ್ಮದ್ ಜುಲಾನ್ ಗೋಸ್ವಾಮಿಗೆ ವಿಶ್ವಕಪ್ ನ 40ನೇ ವಿಕೆಟ್ ಆಗಿ ದಾಖಲೆ ಪುಟ ಸೇರಿಕೊಂಡರು. ಚೆಡಿಯಾ ನೇಷನ್ 19 ರನ್ ಗಳಿಸಿ ರನೌಟ್ ಬಲೆಯಲ್ಲಿ ಬಿದ್ದರು. ಸ್ನೇಹ್ ರಾಣಾ ಕಾನೆಲ್ ವಿಕೆಟ್ ಪಡೆಯುವ ಮೂಲಕ ವಿಂಡೀಸ್ 162 ರನ್ಗಳಿಗೆ ಆಲೌಟ್ ಆಯಿತು. ಭಾರತ 155 ರನ್ಗಳ ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಸ್ನೇಹ್ ರಾಣಾ 3 ವಿಕೆಟ್ ಪಡೆದು ಮಿಂಚಿದರು.