ಅತಿಥೇಯ ನ್ಯೂಜಿ಼ಲೆಂಡ್(New Zealand) ಹಾಗೂ ಪ್ರವಾಸಿ ಭಾರತ ನಡುವಿನ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಬುಧವಾರ ನಡೆಯಲಿದ್ದು, ಕ್ರೈಸ್ಟ್‌ಚರ್ಚ್‌ನಲ್ಲಿ (Christchurch) ನಡೆಯಲಿರುವ ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳು ತಮ್ಮದೇ ರೀತಿಯಲ್ಲಿ ಸಜ್ಜಾಗಿವೆ.
ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ಗೆದ್ದುಬೀಗಿದ್ದರೆ, ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಜಿ಼ಲೆಂಡ್, 3ನೇ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದರೆ. ಅಂತಿಮ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಲೆಕ್ಕಾಚಾರದಲ್ಲಿದೆ. ಎರಡು ತಂಡಗಳ ಲೆಕ್ಕಾಚಾರದ ನಡುವೆ ಮೂರನೇ ಪಂದ್ಯಕ್ಕೂ ಕೂಡ ಮಳೆ ಅಡ್ಡಿಯಾಗುವ ಆತಂಕ ಸಹ ಎದುರಾಗಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಯಾದಲ್ಲಿ ಈಗಾಗಲೇ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದಿರುವ ನ್ಯೂಜಿ಼ಲೆಂಡ್ ತಂಡ ಪ್ರಶಸ್ತಿ ತನ್ನದಾಗಿಸಿಕೊಳ್ಳಲಿದೆ.
ಮೊದಲ ಪಂದ್ಯದಲ್ಲಿ ಬೌಲರ್‌ಗಳ ನೀರಸ ಪ್ರದರ್ಶನ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಎರಡನೇ ಪಂದ್ಯಕ್ಕೆ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಈ ನಡುವೆ 3ನೇ ಪಂದ್ಯಕ್ಕೂ ಸಹ ಟೀಂ ಇಂಡಿಯಾ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಪ್ರಮುಖವಾಗಿ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಂಜೂ ಸ್ಯಾಮ್ಸನ್ ಅವರನ್ನ ಎರಡನೇ ಪಂದ್ಯದಿಂದ ಕೈಬಿಟ್ಟು ದೀಪಕ್ ಹೂಡ ಅವರನ್ನ ಆಡಿಸಲಾಗಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಸಂಜೂ ಸ್ಯಾಮ್ಸನ್ ಅವರನ್ನ ಆಡಿಸುವ ನಿರೀಕ್ಷೆ ಇದೆ.
ಟಿ20 ಸರಣಿ ಸೇರಿದಂತೆ ಏಕದಿನ ಸರಣಿಯಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ರಿಷಬ್ ಪಂತ್ ಬದಲಾಗಿ ಸಂಜೂ ಸ್ಯಾಮ್ಸನ್ ಅವರನ್ನ ಆಡಿಸುವ ನಿರೀಕ್ಷೆ ಇದೆ. ಇದಕ್ಕೆ ಪೂರಕವೆಂಬಂತೆ ಪಂದ್ಯದ ಮುನ್ನ ದಿನವಾದ ಮಂಗಳವಾರ ಸಂಜೂ ಸ್ಯಾಮ್ಸನ್ ನೆಟ್ಸ್‌ನಲ್ಲಿ ಅಭ್ಯಾಸ ಸಹ ನಡೆಸಿದರು. ಉಳಿದಂತೆ ಟೀಂ ಇಂಡಿಯಾದ ಇತರೆ ಆಟಗಾರರು ಸಹ ಕ್ರೈಸ್ಟ್‌ಚರ್ಚ್ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಹಲವು ಗಂಟೆಗಳ ಅಭ್ಯಾಸ ನಡೆಸಿದರು.
ಸಂಭವನೀಯ ಪ್ಲೇಯಿಂಗ್ ಇಲವೆನ್:
ನ್ಯೂಜಿ಼ಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೆ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕ್ಕಿ ಫೆರ್ಗುಸನ್.
ಭಾರತ: ಶಿಖರ್ ಧವನ್(ನಾಯಕ) ಶುಭ್ಮನ್ ಗಿಲ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಉಮ್ರಾನ್ ಮಲ್ಲಿಕ್, ಅರ್ಶದೀಪ್ ಸಿಂಗ್, ಯುಜ್ವೇಂದ್ರ ಚಹಲ್.