Bengaluru – ನಮ್ಮ ಬೆಂಗಳೂರಿನಲ್ಲಿ ನಡೆಯಲಿದೆ ಲಂಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯ..!
ನಮ್ಮ ಬೆಂಗಳೂರಿನ ಹೆಮ್ಮೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣ. ಚಿನ್ನ ಸ್ವಾಮಿ ಅಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆದ್ರೆ ಅದರ ಗಮ್ಮತ್ತೇ ಬೇರೆ. ಪಂದ್ಯ ನೋಡಲು ಮುಗಿಬೀಳುವ ಅಭಿಮಾನಿಗಳ ಸಂಖ್ಯೆಯೇ ದೊಡ್ಡ ಸಂಖ್ಯೆಯಲ್ಲಿದೆ. ಕಬ್ಬನ್ ಪಾರ್ಕ್ ಸುತ್ತಮುತ್ತ ಟಿಕೆಟ್ ಗಾಗಿ ನಿದ್ದೆಗೆಟ್ಟುಕೊಂಡು ಅಭಿಮಾನಿಗಳು ಕಾಯುತ್ತಿರುತ್ತಾರೆ.
ಇದೀಗ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ. ಅದರಲ್ಲೂ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಚಿನ್ನಸ್ವಾಮಿ ಅಂಗಣದಲ್ಲಿ ಪಂದ್ಯ ನೋಡುವ ಅವಕಾಶ ಒದಗಿಬಂದಿದೆ.
ಹೌದು, ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ.
ಶ್ರೀಲಂಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ 16ರವರೆಗೆ ಬೆಂಗಳೂರಿನಲ್ಲೇ ನಡೆಯಲಿದೆ.
ಅಂದ ಹಾಗೇ ಈ ಹಿಂದೆ ಅಂದ್ರೆ 2018ರಲ್ಲಿ ಭಾರತ ಮತ್ತು ಅಫಘಾನಿಸ್ತಾನ ವಿರುದ್ದ ಟೆಸ್ಟ್ ಪಂದ್ಯ ನಡೆದಿತ್ತು. ಇದು ಅಫಘಾನಿಸ್ತಾನ ತಂಡಕ್ಕೆ ಅವಿಸ್ಮರಣೀಯ ಪಂದ್ಯವಾಗಿತ್ತು. ಯಾಕಂದ್ರೆ ಅಫಘಾನಿಸ್ತಾನ ತಂಡ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ. ಐದು ದಿನಗಳ ಈ ಪಂದ್ಯ ಎರಡೇ ದಿನದಲ್ಲಿ ಮುಗಿದು ಹೋಗಿತ್ತು. India vs Sri Lanka 2nd test match at Bangalore
ಇದೀಗ ಲಂಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯಕ್ಕೆ ಕೆಎಸ್ಸಿಎ ಎಲ್ಲಾ ರೀತಿಯಲ್ಲೂ ಸಿದ್ದತೆ ಮಾಡಿಕೊಳ್ಳುತ್ತಿದೆ.
ಭಾರತ ಮತ್ತು ಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ರಿಂದ ಆರಂಭವಾಗಲಿದೆ. ಈ ಪಂದ್ಯ ವಿರಾಟ್ ಕೊಹ್ಲಿಗೆ ನೂರನೇ ಟೆಸ್ಟ್ ಪಂದ್ಯವಾಗಲಿದೆ.
ಇನ್ನು ಫೆಬ್ರವರಿ 24, 26, 27ರಂದು ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.