India Vs Pakistan ಪಂದ್ಯಕ್ಕೆ ಹೈಪ್ ಬೇಕಾಗಿಲ್ಲ – ರೋಹಿತ್ ಶರ್ಮಾ
ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಿಲ್ಡಪ್ ಈಗೀನಿಂದಲೇ ಶುರುವಾಗಿದೆ. ಟೂರ್ನಿಯ ಹೈವೋಲ್ಟೇಜ್ ಪಂದ್ಯದ ಹೈಪ್ ಮಾತ್ರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಹೌದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಅದರ ಗಮ್ಮತ್ತೇ ಬೇರೆಯದ್ದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಪರೂಪಕ್ಕೊಮ್ಮೆ ನಡೆಯುವ ಉಭಯ ದೇಶಗಳ ನಡುವಿನ ಪಂದ್ಯವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದಲೇ ಕಾಯುತ್ತಿದೆ.
2021ರ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು. ಈ ಸೋಲು ಟೀಮ್ ಇಂಡಿಯಾವನ್ನು ಮಾತ್ರವಲ್ಲ, ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೂಡ ಘಾಸಿಗೊಳಿಸಿತ್ತು. ಯಾಕಂದ್ರೆ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋತಿದ್ದು ಮೊದಲ ಬಾರಿಯಾಗಿತ್ತು. ಹೀಗಾಗಿ ಈ ಬಾರಿ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಭರ್ಜರಿ ತಯಾರಿಯನ್ನು ಕೂಡ ಮಾಡಿಕೊಂಡಿದೆ.
ಇನ್ನು ಈ ಪಂದ್ಯದ ಬಗ್ಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೇಳುವುದು ಹೀಗೆ.
ಪ್ರತಿಯೊಬ್ಬರು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನೋಡಿಯೇ ನೋಡುತ್ತಾರೆ. ಈ ಪಂದ್ಯ ಹೆಚ್ಚು ಒತ್ತಡದಲ್ಲಿರುತ್ತೆ ಎಂಬುದುರಲ್ಲಿ ಎರಡು ಮಾತಿಲ್ಲ. ಆದ್ರೆ ಈ ಪಂದ್ಯಕ್ಕೆ ನಾವು ಹೆಚ್ಚು ಹೈಪ್ ಕೊಡುತ್ತಿಲ್ಲ. ಮಾಮೂಲಿ ಪಂದ್ಯದ ವಾತಾವರಣದಲ್ಲಿದ್ದೇವೆ. ಇದು ಮತ್ತೊಂದು ವಿರುದ್ಧದ ಪಂದ್ಯವಷ್ಟೇ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
2018ರಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್ ನಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆಗ ರೋಹಿತ್ ಶರ್ಮಾ ಅವರು ಹಂಗಾಮಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವತ್ತ ತಂಡವನ್ನು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿ ರೋಹಿತ್ ಶರ್ಮಾ ಮೇಲಿದೆ.