ವೆಸ್ಟ್ಇಂಡೀಸ್ ಇನ್ನಿಂಗ್ಸ್ನ 19ನೇ ಓವರ್ ತನಕ ಪಂದ್ಯ ಜಿದ್ದಾಜಿದ್ದಿನಿಂದ ಸಾಗಿತ್ತು. ಆದರೆ ಪೆನಲ್ಟಿಮೇಟ್ ಓವರ್ ಎಸೆದ ಭುವನೇಶ್ವರ್ ಕುಮಾರ್ ತಮ್ಮ ಅನುಭವದ ಧಾರೆಯನ್ನೇ ಎರೆದರು. ರನ್ ಬಿಟ್ಟುಕೊಡಲಿಲ್ಲ. ಡೇಂಜರಸ್ ಪೂರನ್ ವಿಕೆಟ್ ಪಡೆದರು. ಅಂತಿಮ ಓವರ್ನಲ್ಲಿ ಹರ್ಷಲ್ ಪಟೇಲ್ 2 ಸಿಕ್ಸರ್ ಹೊಡೆಸಿಕೊಂಡರೂ, ಭಾರತ 8 ರನ್ಗಳಿಂದ ಪಂದ್ಯ ಗೆದ್ದು ಬೀಗಿತು.
ಟಾಸ್ ಸೋತ ಟೀಮ್ ಇಂಡಿಯಾಕ್ಕೆ ವಿಂಡೀಸ್ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ನೀಡಿತು. ಆದರೆ ಇಶನ್ ಕಿಶನ್ (2), ರೋಹಿತ್ ಶರ್ಮಾ (19) ಮತ್ತು ಸೂರ್ಯಕುಮಾರ್ ಯಾದವ್ (8) ಬೇಗನೆ ಔಟಾದರು. ಮೊದಲ 10 ಓವರುಗಳಲ್ಲಿ ಭಾರತದ ಸಾಧನೆ 3 ವಿಕೆಟ್ ನಷ್ಟಕ್ಕೆ 72 ರನ್.
ರಿಷಬ್ ಪಂತ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಟೀಮ್ ಇಂಡಿಯಾಕ್ಕೆ ಹೊಸ ಹುರುಪು ತುಂಬಿತು. ವಿರಾಟ್ 41 ಎಸೆತಗಳಲ್ಲಿ 52 ರನ್ಗಳಿಸಿದರು. ಸ್ಲಾಗ್ ಓವರುಗಳಲ್ಲಿ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಕೆರಿಬಿಯನ್ ಬೌಲರ್ಗಳ ಬೆಂಡೆತ್ತಿದರು. ಪಂತ್ 28 ಎಸೆತಗಳಲ್ಲಿ ಅಜೇಯ 52 ರನ್ಗಳಿಸಿದರೆ ವೆಂಕಟೇಶ್ ಅಯ್ಯರ್ 18 ಎಸೆತಗಳಲ್ಲಿ 33 ರನ್ ಸಿಡಿಸಿದರು. ಭಾರತ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದರ ಕೆರಿಬಿಯನ್ಸ್ಗೆ ಸ್ಪೋಟಕ ಆರಂಭ ಸಿಗಲಿಲ್ಲ. ಕೈಲ್ ಮೇಯರ್ಸ್ 9 ರನ್ಗಳಿಸಿ ಚಹಲ್ಗೆ ವಿಕೆಟ್ ಒಪ್ಪಿಸಿದರೆ, ರವಿ ಬಿಷ್ಣೋಯಿ 22 ರನ್ಗಳಿಸಿದ್ದ ಬ್ರೆಂಡನ್ ಕಿಂಗ್ ವಿಕೆಟ್ ಪಡೆದರು. ಏರುತ್ತಿದ್ದ ರನ್ ರೇಟ್ ಅನ್ನು ಕೆರಿಬಿಯನ್ಸ್ ಹಿಡಿತಕ್ಕೆ ತಂದು ನಿಲ್ಲಿಸಿದ್ದು ನಿಕೊಲಸ್ ಪೂರನ್ ಮತ್ತು ರೊವ್ಮನ್ ಪೊವೆಲ್. ಸ್ಪೋಟಕ ಆಟ ಆಡಿದ ಈ ಜೋಡಿ 100 ರನ್ಗಳ ಜೊತೆಯಾಟ ಆಡಿತು.
ಪೂರನ್ 41 ಎಸೆತಗಳಲ್ಲಿ 62ರನ್ ಸಿಡಿಸಿರೆ, ಪೊವೆಲ್ 36 ಎಸೆಗಳಲ್ಲಿ ಅಜೇಯ 68 ರನ್ ಸಿಡಿಸಿದರು. ವಿಂಡೀಸ್ ಕೊನೆಯ 12 ಎಸೆತಗಳಲ್ಲಿ 29 ರನ್ಗಳಿಸಬೇಕಿತ್ತು. ಈ ಹಂತದಲ್ಲಿ ದಾಳಿಗಿಳಿದ ಭುವನೇಶ್ವರ್ ಕುಮಾರ್ 19ನೇ ಓವರ್ನಲ್ಲಿ ಅಪಾಯಕಾರಿ ಪೂರನ್ ವಿಕೆಟ್ ಹಾರಿಸಿದ್ದಲ್ಲದೆ ಕೇವಲ 4 ರನ್ ನೀಡಿರು. 20ನೇ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 25 ರನ್ ಬೇಕಿತ್ತು. ಹರ್ಷಲ್ ಪಟೇಲ್ 16 ರನ್ಗಳನ್ನು ಬಿಟ್ಟುಕೊಟ್ಟರು. ಭಾರತ 8 ರನ್ಗಳಿಂದ ಪಂದ್ಯ ಗೆದ್ದು ಸಂಭ್ರಮಿಸಿತು. 3 ಪಂದ್ಯಗಳ ಸರಣಿಯನ್ನು 2-0 ಯಿಂದ ಗೆದ್ದು ಮುನ್ನಡೆಯಿತು.