ಜಿಂಬಾಬ್ವೆ ವಿರುದ್ಧ ಭಾರತ ಕ್ಲೀನ್ ಸ್ವೀಪ್ ಸಾಧನೆ: ಚೊಚ್ಚಲ ಶತಕ ಬಾರಿಸಿದ ಗಿಲ್
ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ 13 ರನ್‌ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ ತಂಡ 49.3 ಓವರ್‌ಗಳಲ್ಲಿ 276 ರನ್ ಗಳಿಸಲಷ್ಟೇ ಶಕ್ತವಾಯಿತು.

ಮೊದಲ ವಿಕೆಟ್ ಗೆ ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಜೊತೆಗೂಡಿ 91 ಎಸೆತಗಳಲ್ಲಿ 63 ರನ್ ಸೇರಿಸಿದರು. ರಾಹುಲ್ ಆಟ 30 ರನ್ ಗಳಿಗೆ ಸೀಮಿತವಾಯಿತು. ಶಿಖರ್ 40 ರನ್ ಬಾರಿಸಿ ಔಟ್ ಆದರು.

ಮೂರನೇ ವಿಕೆಟ್ ಗೆ ಶುಭಮನ್ ಗಿಲ್ ಹಾಗೂ ಇಶಾನ್ ಕಿಶನ್ ಸಮಯೋಚಿತ ಆಟದ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಈ ಜೋಡಿ ಜಿಂಬಾಬ್ವೆ ಬೌಲರ್ ಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿತು. ಪರಿಣಾಮ 127 ಎಸೆತಗಳಲ್ಲಿ 140 ರನ್ ಸೇರಿಸಿ ತಂಡಕ್ಕೆ ನೆರವಾಯಿತು.

ಟೀಮ್ ಇಂಡಿಯಾ ಪರ ಶುಭಮನ್ ಗಿಲ್ ಅತಿ ಹೆಚ್ಚು ರನ್ ಗಳಿಸಿದರು. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದರು. ಪಂಜಾಬ್ ಬ್ಯಾಟ್ಸ್‌ಮನ್ 97 ಎಸೆತಗಳಲ್ಲಿ 130 ರನ್ ಗಳಿಸಿದರು. ಇಶಾನ್ ಕಿಶನ್ ತಮ್ಮ ODI ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಸಹ ಗಳಿಸಿದರು.

ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆದರು.
ಜಿಂಬಾಬ್ವೆ ಪರ ಸಿಕಂದರ್ ರಜಾ 95 ಎಸೆತಗಳಲ್ಲಿ 115 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಒಂದು ಹಂತದಲ್ಲಿ ಇವರು ತಮ್ಮ ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂದು ಅನಿಸಿತು. ಆದರೆ ಶಾರ್ದೂಲ್ ಠಾಕೂರ್ ಅವರ ಎಸೆತದಲ್ಲಿ ಶುಭಮನ್ ಗಿಲ್ ಅದ್ಭುತ ಕ್ಯಾಚ್ ಪಡೆದು ತಮ್ಮ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

ಅವೇಶ್ ಖಾನ್ ಗರಿಷ್ಠ 3 ವಿಕೆಟ್ ಪಡೆದರು. ದೀಪಕ್ ಚಹಾರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಸರಣಿಯಲ್ಲಿ 3-0 ಅಂತರದ ಗೆಲುವಿನೊಂದಿಗೆ ಭಾರತ ತಂಡ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟಿದೆ. ಪಾಕಿಸ್ತಾನ ಇದುವರೆಗೆ ಜಿಂಬಾಬ್ವೆ ವಿರುದ್ಧ 62 ಪಂದ್ಯಗಳನ್ನು ಆಡಿದ್ದು, 54 ಪಂದ್ಯಗಳನ್ನು ಗೆದ್ದಿದೆ. ಈ ಗೆಲುವಿನೊಂದಿಗೆ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 54 ಗೆಲುವು ಸಾಧಿಸಿದೆ.
India, clean sweep, Zimbabwe, Cricket, Sports